Sunday, April 20, 2025
Google search engine

Homeರಾಜ್ಯಸುದ್ದಿಜಾಲಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ, ನಾಳೆ ಮತದಾನ ಕಾರ್ಯಕ್ಕೆ ಸಕಲ ಸಜ್ಜು

ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ, ನಾಳೆ ಮತದಾನ ಕಾರ್ಯಕ್ಕೆ ಸಕಲ ಸಜ್ಜು

ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಕಂಪ್ಲಿ, ಬಳ್ಳಾರಿ ಗ್ರಾಮೀಣ ಹಾಗೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಬಳ್ಳಾರಿ ನಗರದ ವಿವಿಧೆಡೆ ಸೋಮವಾರದಂದು ಅಚ್ಚುಕಟ್ಟಾಗಿ ನೆರವೇರಿದ್ದು, ಮತದಾನ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ, ಸಿಬ್ಬಂದಿ ಮತಗಟ್ಟೆಗಳತ್ತ ಬಿರು ಬಿಸಿಲಿನ ನಡುವೆಯೂ ಹುರುಪಿನಿಂದ ತೆರಳಿದರು.

91-ಕಂಪ್ಲಿ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಸುಧಾಕ್ರಾಸ್‍ನ ಸೆಂಟ್ ಫಿಲೊಮೀನಾ ಪಬ್ಲಿಕ್ ಸ್ಕೂಲ್, 93-ಬಳ್ಳಾರಿ ಗ್ರಾಮೀಣ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣ ಮತ್ತು 94-ಬಳ್ಳಾರಿ ನಗರ ಮತಕ್ಷೇತ್ರದ ಮಸ್ಟರಿಂಗ್ ಕಾರ್ಯ ನಗರದ ಕೋಟೆ ಪ್ರದೇಶದ ಸೆಂಟ್ ಜಾನ್ಸ್ ಜ್ಯೂನಿಯರ್ ಕಾಲೇಜ್‍ನಲ್ಲಿ ಸೋಮವಾರ ಅಚ್ಚುಕಟ್ಟಾಗಿ ಜರುಗಿತು. ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಬೆಳಿಗ್ಗೆಯಿಂದಲೇ ಹಾಜರಿದ್ದು, ಮಸ್ಟರಿಂಗ್ ಕಾರ್ಯ ಪೂರ್ಣಗೊಳ್ಳುವವರೆಗೂ ಮೇಲುಸ್ತುವಾರಿ ವಹಿಸಿದ್ದರು.

ಮತಗಟ್ಟೆಗಳಿಗೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಮಸ್ಟರಿಂಗ್ ಕಾರ್ಯ ಜರುಗುವ ಕಾಲೇಜುಗಳ ಆವರಣದಲ್ಲಿ ಸೇರತೊಡಗಿದರು. ಇದರ ಜೊತೆಗೆ ಚುನಾವಣೆ ಕಾರ್ಯ ಹಾಗೂ ಮತಗಟ್ಟೆಯ ಬಂದೋಬಸ್ತ್‍ಗಾಗಿ ನಿಯೋಜಿತಗೊಂಡಿರುವ , ಸಿಆರ್‍ಪಿಎಫ್ ಯೋಧರು, ಗೃಹರಕ್ಷಕ ದಳದವರು ಕೂಡ ಆಗಮಿಸಿದ್ದರು. ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಯೋಧರನ್ನು ಕರೆದುಕೊಂಡು ಹೋಗಲು ಬಸ್, ಕ್ರೂಸರ್ ಹಾಗೂ ಜೀಪ್‍ಗಳು ಕಾಲೇಜುಗಳ ಆವರಣದಲ್ಲಿ ಸಾಲಾಗಿ ಜಮಾವಣೆಗೊಂಡಿದ್ದವು.

ಆಯಾ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಲ್ಲಿನ ಮತಗಟ್ಟೆಗಳತ್ತ ತೆರಳುವಂತಹ ಮಾರ್ಗಗಳನ್ನು ಗುರುತಿಸಿ, ಬಸ್, ಕ್ರೂಸರ್ ಹಾಗೂ ಮಿನಿ ಬಸ್ ಮುಂತಾದ ವಾಹನಗಳನ್ನು ನಿಯೋಜಿಸಲಾಗಿತ್ತು. ಕಾಲೇಜು ಆವರಣದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ತಾವು ತೆರಳಬೇಕಿರುವ ಮತಗಟ್ಟೆಯ ವಿವರ ಹಾಗೂ ಬಸ್‍ಗಳ ವಿವರವನ್ನು ಧ್ವನಿವರ್ಧಕ ಮೂಲಕ ತಿಳಿಸುವ ವ್ಯವಸ್ಥೆ ಮಾಡಲಾಗಿತ್ತು. ಇನ್ನೊಂದೆಡೆ, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್ ಯಂತ್ರದ ಪೆಟ್ಟಿಗೆ ಹಾಗೂ ವಿಶೇಷ ಕಿಟ್ ಬ್ಯಾಗ್ ಜೊತೆಗೆ ಹೆಲ್ತ್‍ಕಿಟ್‍ಅನ್ನು ವಿತರಿಸಲು ಸೆಕ್ಟರ್‍ವಾರು ಕೌಂಟರ್‍ಗಳನ್ನು ಸ್ಥಾಪಿಸಿ, ಆ ಮೂಲಕ ಸಂಬಂಧಪಟ್ಟ ಮತಗಟ್ಟೆಗಳ ಸಿಬ್ಬಂದಿಗೆ ಚುನಾವಣಾ ಸಾಮಗ್ರಿ ವಿತರಿಸುವ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಲಾಯಿತು.

ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ಗೊಂದಲಕ್ಕೆ ಆಸ್ಪದವಿಲ್ಲದಂತೆ, ಮಸ್ಟರಿಂಗ್ ಕಾರ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೈಗೊಳ್ಳಲಾಯಿತು. ಮಸ್ಟರಿಂಗ್ ಕಾರ್ಯಕ್ಕೆ ಆಗಮಿಸಿದ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಲ್ಲಿ, ತ್ವರಿತ ಸ್ಪಂದನೆಗಾಗಿ, ವೈದ್ಯರಿಂದ ಆರೋಗ್ಯ ತಪಾಸಣೆ, ಅಗತ್ಯ ಔಷಧಿಗಳು, ಓಆರ್‍ಎಸ್, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.

RELATED ARTICLES
- Advertisment -
Google search engine

Most Popular