Saturday, April 19, 2025
Google search engine

Homeಸ್ಥಳೀಯಪ್ರಸಾದ್ ನೈಜ ಅಂಬೇಡ್ಕರ್ ವಾದಿಯಾಗಿದ್ದರು : ಸಾಹಿತಿ ಬನ್ನೂರು ರಾಜು

ಪ್ರಸಾದ್ ನೈಜ ಅಂಬೇಡ್ಕರ್ ವಾದಿಯಾಗಿದ್ದರು : ಸಾಹಿತಿ ಬನ್ನೂರು ರಾಜು

ಮೈಸೂರು: ನಡೆ-ನುಡಿಗಳೆರಡ ರಲ್ಲೂ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿ ಕೊಂಡು ಐದು ದಶಕಗಳ ಸುಧೀರ್ಘ ಕಾಲದ ಕರ್ನಾಟಕದ  ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಶೋಷಿತರೆದೆಯ ಜೀವವಾಗಿದ್ದ ಅಪ್ರತಿಮ ದಲಿತ ನಾಯಕ ಹಿರಿಯ ರಾಜಕೀಯ ಮುತ್ಸದ್ಧಿ ವಿ.ಶ್ರೀನಿವಾಸ ಪ್ರಸಾದ್ ಅವರು ನೈಜ ಅಂಬೇಡ್ಕರ್ ವಾದಿಯಾಗಿ  ದ್ದರೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. 

  ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇಂದು ಸೋಮವಾರ ನಡೆದ  ಇತ್ತೀಚೆಗಷ್ಟೇ ನಮ್ಮನ್ನಗಲಿದ ಕೇಂದ್ರ ಮತ್ತು ರಾಜ್ಯದ ಮಾಜಿ ಸಚಿವರೂ ಹಾಲಿ ಸಂಸದರೂ ಆಗಿದ್ದ ನಾಡು ಮೆಚ್ಚಿದ ಮೌಲ್ಯಾಧಾರಿತ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಸಲ್ಲಿಸಿದ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದಲಿತರನ್ನು, ಶೋಷಿತರನ್ನು ತಾವು ಉದ್ಧಾರಮಾಡುವುದಾಗಿ ಅಂಬೇಡ್ಕರ್ ಹೆಸರು ಹೇಳಿ ಕೊಂಡು ಸ್ವಾರ್ಥ ರಾಜಕಾರಣ ಮಾಡುತ್ತಿರುವ ಕೆಲವು ರಾಜಕಾರಣಿಗಳಿಗೆ ಪ್ರಸಾದ್ ಅವರು ಸಿಂಹ ಸ್ವಪ್ನವಾಗಿದ್ದರಷ್ಟೇ ಅಲ್ಲದೆ ದಲಿತಪರ ಕಾಳಜಿಯ ಅಭಿವೃದ್ಧಿಯಿಂದ ಇತರರಿಗೆ ಮಾದರಿಯಾಗಿದ್ದರೆಂದರು.

   ಶೋಷಿತರ ಎದೆಯ ಹಾಡಾಗಿ ರುವ ಸಂವಿಧಾನ ಶಿಲ್ಪಿ, ವಿಶ್ವ ಜ್ಞಾನಿ,ಭಾರತ ರತ್ನ ಅಂಬೇಡ್ಕರ್ ಅವರನ್ನು ಕುರಿತು ಸುವಿಖ್ಯಾತ ದಲಿತ ಕವಿ ಸಿದ್ದಲಿಂಗಯ್ಯ  ನವರು ಬರೆದಿರುವ “ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ ಅಗಲಕ್ಕೂ ನಿಂತ  ಆಲವೇ……” ಎಂಬ ಗೀತೆಯನ್ನು ಎಲ್ಲೇ ಕೇಳಿದರೂ ಭಾವುಕರಾಗಿ ಗಳಗಳನೆ ಅತ್ತುಬಿಡುತ್ತಿದ್ದ ಶ್ರೀನಿವಾಸ್ ಪ್ರಸಾದ್ ಅವರು ಅಂಬೇಡ್ಕರ್ ರವರನ್ನು ಅಷ್ಟರಮಟ್ಟಿಗೆ ತಮ್ಮ ಎದೆಯೊಳಕ್ಕೆ ಇಳಿಸಿಕೊಂಡು ಬಿಟ್ಟಿದ್ದರು. ಶೋಷಿತರ ಬದುಕನ್ನು ಪಾವನಗೊಳಿಸಿದ ಪುಣ್ಯಾತ್ಮ ಬಾಬಾ ಸಾಹೇಬರ ಕಷ್ಟಕರ ಬದುಕೇ ನಮಗಿಂದು ಸುಖಕರವಾಗಿದೆ ಎಂದು ತಾವು ಬದುಕಿರುವ ತನಕವೂ ಹೇಳುತ್ತಾ ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಆರಾಧಿಸುವುದಕ್ಕಿಂತ ಹೆಚ್ಚಾಗಿ ಅವರ ತತ್ವಾದರ್ಶ ಗಳನ್ನು ಅನುಸರಿಸಬೇಕೆಂದು ಶೋಷಿತ ಸಮುದಾಯದಲ್ಲಿ ಜಾಗೃತಿಯ ದೀಪ ಹಚ್ಚಿಟ್ಟವರು ಶ್ರೀನಿವಾಸ ಪ್ರಸಾದರೆಂದು ಹೇಳಿದರು.

   ಪ್ರಸಾದ್ ಅವರು ತಮ್ಮಿಡೀ ಜೀವನದಲ್ಲಿ ಯಾರನ್ನೂ  ಹೆದರಿಸಲಿಲ್ಲ. ಹಾಗೆಯೇ ಯಾರಿಗೂ ಹೆದರಲಿಲ್ಲ. ತಮ್ಮ ಜನೋಪಯೋಗಿ ಗುಣದಿಂದ ದಲಿತರು ಮಾತ್ರವಲ್ಲದೆ ದಲಿತೇತರರಾದ ಪ್ರತಿಯೊಂದು ವರ್ಗವನ್ನೂ ಪ್ರೀತಿಯಿಂದ ಗೆದ್ದರು. ರಾಜಕಾರಣಿಗಳಲ್ಲೇ ಅವರ ವ್ಯಕ್ತಿತ್ವ ವಿಶಿಷ್ಟವಾದದ್ದು. ಹಂಸ ಪಕ್ಷಿಯಂತೆ ಹಾಲಿನೊಳಗಣ ನೀರನ್ನು ಬೇರ್ಪಡಿಸಿ ಹಾಲನ್ನಷ್ಟೇ ಪಡೆದುಕೊಳ್ಳುವ ಶ್ರೇಷ್ಠ ವ್ಯಕ್ತಿತ್ವದ ಹಂಸ ಕ್ಷೀರ ನ್ಯಾಯ ಅವರದೆಂದು ಅವರ ವ್ಯಕ್ತಿತ್ವವನ್ನು ಗುಣಗಾನ ಮಾಡಿದ ಬನ್ನೂರು ರಾಜು ಅವರು,ಪ್ರಸಾದ್ ಎಂದರೆ ಸ್ವಾಭಿಮಾನದ ಪ್ರತೀಕ. ಅವರು ಸ್ವಾಭಿಮಾನವನ್ನು ಬಿಟ್ಟು ಬಾಲ ಬುಡುಕ ರಾಜಕಾರಣವನ್ನು ಮಾಡಿದ್ದರೆ ಎಂದೋ ಈ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದರೆ ಅದು ಅವರಿಗೆ ಒಗ್ಗದ  ವಿಷಯವಾಗಿತ್ತು. ತನ್ನ ಜನರೇ ತನ್ನ ಅಧಿಕಾರ. ತನ್ನ ಜನರೇ ತನ್ನ ಸರ್ವಸ್ವವೆಂದು  ಶೋಷಿತರ ಸಂರಕ್ಷಣೆಗಾಗಿ ಬದುಕಿದರು. ಈಗ ಅಂತಹ ಧೀಮಂತ ದಲಿತ ನಾಯಕ ಅಮರರಾಗಿದ್ದಾರೆ. ಇದರಿಂದ ನಾಡಿಗೆ ಅಪಾರಷ್ಟವಾಗಿದ್ದು ಅದರಲ್ಲೂ ಮೈಸೂರು ಭಾಗಕ್ಕೆ ಪ್ರಸಾದ್ ರಂತಹ  ಮತ್ತೊಬ್ಬ ನಿಸ್ವಾರ್ಥ ದಲಿತ ನಾಯಕ ಸಿಗುವುದು ದುರ್ಲಭವೆಂದು ವಿಷಾದಿಸಿದರು.

   ಸಂಸ್ಕೃತಿ ಚಿಂತಕ ಡಾ.ಕೆ. ರಘು ರಾಮ್ ವಾಜಪೇಯಿ ಅವರು ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರಸಾದ್ ಅವರ ಐವತ್ತು ವರ್ಷಗಳ ರಾಜಕೀಯ ಬದುಕು ಮತ್ತು ಸಾಧನೆ ಹಾಗೂ ಸಿದ್ಧಿ ಕುರಿತಂತೆ ಸುದೀರ್ಘವಾಗಿ ಮಾತನಾಡಿ ನುಡಿ ನಮನ ಸಲ್ಲಿಸಿದರು. ಸಂಸ್ಕೃತ ವಿದ್ವಾಂಸರಾದ ಲೇಖಕಿ ಡಾ.ಲೀಲಾ ಪ್ರಕಾಶ್ ಮಾತನಾಡಿದರು. ಮೈಸೂರು ಜಿಲ್ಲಾ ಬಿಜೆಪಿಯ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ರಾಜು ಅವರು ಅಧ್ಯಕ್ಷತೆ ವಹಿಸಿದ್ದರು. ಚಲನ ಚಿತ್ರರಂಗದ ಯುವ ನಾಯಕನಟ ಸುಪ್ರೀತ್, ಸಮಾಜಸೇವಕ ದೊರೆಸ್ವಾಮಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಇನ್ನಿತರರಿದ್ದರು. ಪ್ರಾರಂಭದಲ್ಲಿ  ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವ ರಾಜೇಂದ್ರಸ್ವಾಮಿ ಅವರು  ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಕೊನೆಯಲ್ಲಿ ಎಲ್ಲರೂ ಶ್ರೀನಿವಾಸ್ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನದೊಡನೆ ಗೌರವ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular