ಹೈದರಾಬಾದ್: ಇಲ್ಲಿನ ಬಾಚುಪಲ್ಲಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ನಾಲ್ಕು ವರ್ಷದ ಮಗು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಚುಪಲ್ಲಿ ಪೊಲೀಸರ ಪ್ರಕಾರ, ಬಲಿಯಾದವರು ಒಡಿಶಾ ಮತ್ತು ಛತ್ತೀಸ್‌ಗಢಕ್ಕೆ ಸೇರಿದ ವಲಸೆ ಕಾರ್ಮಿಕರು ಎಂದು ತಿಳಿದು ಬಂದಿದೆ. ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಅವರ ದೇಹಗಳನ್ನು ಜೆಸಿಬಿ ಬಳಸಿ ಅವಶೇಷಗಳಡಿಯಿಂದ ಬುಧವಾರ ಮುಂಜಾನೆ ಹೊರತೆಗೆಯಲಾಗಿದೆ.
ನಗರ ಮತ್ತು ತೆಲಂಗಾಣದ ಹಲವೆಡೆ ಭಾರೀ ಮಳೆ ಸುರಿದಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಹಲವೆಡೆ ಜಲಾವೃತಗೊಂಡು ಸಂಚಾರಕ್ಕೆ ಅಡಚಣೆಯಾಗಿದೆ. ಡಿಆರ್‌ಎಫ್ (ವಿಪತ್ತು ಪರಿಹಾರ ಪಡೆ) ತಂಡಗಳನ್ನು ನಿಯೋಜಿಸಲಾಗಿದ್ದು, ನಗರದ ವಿವಿಧೆಡೆ ನೀರು ನಿಂತಿರುವುದು ಮತ್ತು ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.