ದೆಹಲಿ : ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ಮೇ ೧೦ ರಂದು ಪ್ರಕಟಿಸಲಿದೆ.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಟರ್ ಜನರಲ್ ಎಸ್ ವಿ ರಾಜು ಅವರಿಗೆ ತಿಳಿಸಿತು. ಅಂದು ತಮ್ಮ ಸಲ್ಲಿಕೆಗಳೊಂದಿಗೆ ಸಿದ್ಧವಾಗಿರಿ ಎಂದು ಸೂಚಿಸಿತು. ಶುಕ್ರವಾರದಂದು ನಾವು ಮಧ್ಯಂತರ ಆದೇಶ ನೀಡುತ್ತೇವೆ. ಅದೇ ದಿನ ಬಂಧನಕ್ಕೆ ಸಂಬಂಧಿಸಿದ ಅರ್ಜಿಗೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿಗಳಾದ ಖನ್ನಾ ತಿಳಿಸಿದರು.
ಮಂಗಳವಾರ ನಡೆದ ವಿಚಾರಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆ ಪ್ರಚಾರ ನಡೆಸುವ ಸಂಬಂಧ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರಿದ್ದ ಪೀಠದಿಂದ ಯಾವುದೇ ಮಧ್ಯಂತರ ಆದೇಶವನ್ನು ಪಡೆದುಕೊಳ್ಳಲಿಲ್ಲ. ಒಂದು ವೇಳೆ ಮಧ್ಯಂತರ ಜಾಮೀನು ಪಡೆದುಕೊಂಡರೆ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಬಾರದು ಎಂದು ಪೀಠವು ವಿಚಾರಣೆಯ ಸಂದರ್ಭದಲ್ಲಿ ತಿಳಿಸಿತು.