ಮಂಡ್ಯ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ವಿದ್ಯಾರ್ಥಿನಿಯೋರ್ವಳು ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ದರೂ ತಾನು ಫೇಲ್ ಆಗಿದ್ದೇನೆಂದು ತಪ್ಪಾಗಿ ಭಾವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹುಲಿಗೆರೆಪುರ ಗ್ರಾಮದ ಅಮೃತಾ (೧೬) ಮೃತ ವಿದ್ಯಾರ್ಥಿನಿ. ಅಮೃತಾ ನಗರಕೆರೆ ಗ್ರಾಮದ ಪೂರ್ಣಿಮಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡ ನಂತರ ಅದನ್ನು ಮೊಬೈಲ್‌ನಲ್ಲಿ ನೋಡಿದ್ದಾಳೆ. ಆದರೆ, ೪೦೦ಕ್ಕಿಂತ ಕಡಿಮೆ ಅಂಕ ಬಂದಿದೆ ಎಂದು ತಪ್ಪಾಗಿ ಗ್ರಹಿಸಿದ್ದಾಳೆ. ತಾನು ಫೇಲ್ ಆಗಿದ್ದೇನೆಂದು ಭಾವಿಸಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಾಸ್ತವದಲ್ಲಿ ಅಮೃತಾ ಶೇ.೫೭% ಅಂಕಗಳನ್ನು ಪಡೆದು ತೇರ್ಗಡೆ ಆಗಿದ್ದಾಳೆ. ಆದರೆ, ಈ ಫಲಿತಾಂಶವನ್ನು ಫೇಲ್ ಆಗಿದ್ದೇನೆಂದು ತಪ್ಪಾಗಿ ಅರ್ಥೈಸಿಕೊಂಡು ಜೀವವನ್ನು ಕಳಕೊಂಡಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.