ಮಂಡ್ಯ: ಖಂಡಿತವಾಗಿಯೂ SITಯಿಂದ ನ್ಯಾಯ ಸಿಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದು ಸಾರಿ SITಗೆ ಕೊಟ್ಟ ಮೇಲೆ ನಾವ್ಯಾರು ಮಾತಾಡಬಾರದು. ಪ್ರೊಸೀಜರ್ ಗೆ ಬಹಳ ವಿರುದ್ಧವಾದದ್ದು ಇದು. ಎಲ್ಲವೂ ಗೊತ್ತಿದ್ದು ಸುಮ್ ಸುಮ್ಮನೇ ಯಾಕೆ ಮಾತಾಡ್ತಾರೋ ಗೊತ್ತಿಲ್ಲ. ನನಗೂ ಅರ್ಥ ಆಗ್ತಿಲ್ಲ ಎಂದರು.
ಜಾತಿ, ಧರ್ಮದ ಮೇಲೆ ದೂರುವುದು, ನೋಡುವುದು ಸರಿಯಲ್ಲ. ನಮ್ಮನ್ನ ಲೀಡರ್ ಮಾಡುವುದು ಜನ, ಬೇರೆ ಯಾವುದೂ ಅಲ್ಲ. ಎಲ್ಲರೂ ಸೇರಿಕೊಂಡು ಕರ್ನಾಟಕ ರಾಜ್ಯಕ್ಕೆ ಮಸಿ ಬಳಿಯುತ್ತಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ, ಇದು ನಿಲ್ಲಬೇಕು ಎಂದು ತಿಳಿಸಿದರು.
SITಯಿಂದ ನ್ಯಾಯ ಸಿಗಲ್ಲ, ಸಿಬಿಐಗೆ ವಹಿಸಬೇಕೆಂಬ ವಿಚಾರವಾಗಿ ಮಾತನಾಡಿ, ಅದನ್ನ ಒಪ್ಪಲ್ಲ, SIT ನಮ್ಮದೇ ಅಲ್ವಾ. ನಮ್ಮ ರಾಜ್ಯದ ಪೊಲೀಸರನ್ನ ನಾವೇ ನಂಬಲ್ಲ ಅಂದ್ರೆ ಇನ್ಯಾರು ನಂಬುತ್ತಾರೆ. ಖಂಡಿತವಾಗಿಯೂ SITಯಿಂದ ನ್ಯಾಯ ಸಿಗುತ್ತೆ ಎಂದರು.
ಕಾಂಗ್ರೆಸ್‌ನವರ ಕೈವಾಡ ಎಂದು ಜೆಡಿಎಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಅವರ ಕೈವಾಡ, ಇವರ ಕೈವಾಡ ಅಂತ ಅನ್ನೋದು ಸರಿಯಲ್ಲ. ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಆಡೋದು ತರವಲ್ಲ. ಅದು ನಮ್ಮ ಮರ್ಯಾದೆ ನಾವೇ ಕಳೆದುಕೊಂಡಂತೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ವಿದೇಶಲ್ಲಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ವಿದೇಶದಲ್ಲಿರುವ ಪ್ರಜ್ವಲ್ ಬರಬೇಕು. ಯೂನಿಯನ್ ಗೌರ್ನಮೆಂಟ್ ಪ್ರಜ್ವಲ್ ನ ಕರೆಸಬೇಕು. ಯಾಕಂದ್ರೆ ಅವರ ಕೈಯಲ್ಲೇ ಎಲ್ಲವೂ ಇರೋದು. ತನಿಖಾ ತಂಡ ಎಲ್ಲವೂ ಅವರ ಕೈಯಲ್ಲೇ ಇದೆ ಎಂದರು.