Saturday, April 19, 2025
Google search engine

Homeರಾಜಕೀಯಮೇ 11ರಿಂದ 13ರವರೆಗೆ ಬೃಹತ್ ಕೃಷಿ ಮೇಳ, ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮ ಸಂಭ್ರಮ

ಮೇ 11ರಿಂದ 13ರವರೆಗೆ ಬೃಹತ್ ಕೃಷಿ ಮೇಳ, ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮ ಸಂಭ್ರಮ

ಮಂಗಳೂರು (ದಕ್ಷಿಣ ಕನ್ನಡ): ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ತಿರುವೈಲು, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ ಜಂಟಿ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಾವಯವ ಕೃಷಿಕ ಗ್ರಾಹಕ ಬಳಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನವೋದಯ ಸ್ವ ಸಹಾಯ ಸಂಘ ಇದರ ಸಹಯೋಗದಲ್ಲಿ ಬೃಹತ್ ಕೃಷಿ ಮೇಳ ಮತ್ತು ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮ ಸಂಭ್ರಮ ಕಾರ್ಯಕ್ರಮವು ಇದೇ ಮೇ 11ರಿಂದ 13ರವರೆಗೆ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಜರುಗಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

“ಕೃಷಿ ಕುರಿತು ಇಂದಿನ ಯುವಜನತೆ ನಿರಾಸಕ್ತಿ ವಹಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಆಧುನಿಕ ಕೃಷಿ ಪದ್ಧತಿಯಿಂದ ಲಾಭ ಗಳಿಸಬಹುದು. ಸಾವಯವ ಕೃಷಿ ಪದ್ಧತಿಯಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು ಅನ್ನುವುದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು. ಇದರ ಜೊತೆಗೆ ಜನರಿಗೆ ಮನೋರಂಜನೆ ನೀಡುವ ಕಾರಣಕ್ಕಾಗಿ ಯಕ್ಷಗಾನ ಸಂಸ್ಕೃತಿಯ ಉಳಿವಿಗೆ ಪೂರಕವಾದ ಕಾರ್ಯಕ್ರಮ, ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಜಗದೀಶ್ ಶೇಣವ ಮಾತನಾಡಿ,”ಕೃಷಿ ಚಟುವಟಿಕೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ ಮೇಳದಂತಹ ಕಾರ್ಯಕ್ರಮಗಳು ಸಹಕಾರಿ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ ದಶಮ ವರ್ಷ ಪೂರೈಸುತ್ತಿರುವ ಈ ವೇಳೆಯಲ್ಲಿ ಕೃಷಿ ಮೇಳದ ಆಯೋಜನೆಯನ್ನು ಮಾಡಲಾಗಿದೆ. ಲಕ್ಷಾಂತರ ಮಂದಿ ಇದರಲ್ಲಿ ಪಾಲ್ಗೊಂಡರೆ ಆಯೋಜಕರ ಶ್ರಮ ಸಾರ್ಥಕ” ಎಂದರು.

ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಮಾತನಾಡಿ, “ನಮ್ಮ ಪ್ರತಿಷ್ಠಾನವು ಯಕ್ಷಗುರು ರಾಕೇಶ್ ರೈ ಅಡ್ಕ ಸಾರಥ್ಯದಲ್ಲಿ ನಡೆಯುತ್ತಿದೆ. ಪ್ರತಿಷ್ಠಾನದಲ್ಲಿ ಯಕ್ಷಗಾನ ಕಲಿತವರು ಪಾವಂಜೆ ಮತ್ತು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಘಟನೆಯ ದಶಮ ಸಂಭ್ರಮವನ್ನು ಈ ಬಾರಿ ವಿನೂತನವಾಗಿ ಆಚರಿಸುವ ಉದ್ದೇಶದಿಂದ ಕೃಷಿ ಮೇಳ, ಆಹಾರ ಮೇಳ, ವಾಹನ ಮೇಳ, ಹಲಸು ಮೇಳ, ಜಾನುವಾರು ಮೇಳ, ಶ್ವಾನ ಪ್ರದರ್ಶನ, ದೇಸಿ ಗೋವು ತಳಿಗಳ ಪ್ರದರ್ಶನ, ಗೋವು ಉತ್ಪನ್ನ ಮಳಿಗೆ, ಫಲಪುಷ್ಪ ಮೇಳ,ಗುಡಿ ಕೈಗಾರಿಕೆ, ಆರ್ಟ್ ಗ್ಯಾಲರಿ, ಸಂಗೀತ ಸಂಜೆ, ತಾಲೀಮು, ಹಗ್ಗ ಜಗ್ಗಾಟ, ಕಬಡ್ಡಿ, ಕೃಷಿ ವಿಚಾರಗೋಷ್ಠಿ, ಯಕ್ಷ ಹಾಸ್ಯ ವೈಭವ, ಜಾದು ಪ್ರದರ್ಶನ, ಮಿಮಿಕ್ರಿ, ಬಲೇ ತೆಲಿಪುಗ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ, ಚಂದ್ರಹಾಸ್ ರೈ, ಉಪಾಧ್ಯಕ್ಷ ಶೀನ ಕೋಟ್ಯಾನ್, ಶ್ರೀನಿವಾಸ್ ಮಲ್ಲೂರು, ದೇವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular