ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ಹಣ್ಣುಗಳು ಆರೋಗ್ಯಕರ ಮಾತ್ರವಲ್ಲ, ತಿನ್ನಲು ರುಚಿಕರವೂ ಹೌದು. ಹೀಗೆ ಉತ್ತಮ ಸುವಾಸನೆ ಮತ್ತು ರುಚಿಯನ್ನು ಹೊಂದಿರುವ ಹಣ್ಣುಗಳಲ್ಲಿ ಹಲಸಿನ ಹಣ್ಣು ಕೂಡ ಒಂದಾಗಿದೆ.
ಹಲಸಿನ ಹಣ್ಣಿನ ಹೊರಭಾಗ ಮುಳ್ಳು ಮತ್ತು ಒರಟಾಗಿ ಕಂಡರೂ, ಹಲಸಿನ ಹಣ್ಣಿನ ಒಳಭಾಗ ಹಳದಿಯಾಗಿದ್ದು ಸಿಹಿಯಾಗಿರುತ್ತದೆ. ಇದು ಹಲಸಿನ ಹಣ್ಣಿನ ಸೀಸನ್ ಆಗಿರುವುದರಿಂದ ಮಾರುಕಟ್ಟೆಗಳಲ್ಲಿ ಮತ್ತು ಬೀದಿಗಳಲ್ಲಿ ಕಡಿಮೆ ಬೆಲೆಗೆ ಹಲಸಿನ ಹಣ್ಣುಗಳನ್ನು ಮಾರಾಟ ಮಾಡುವುದನ್ನು ನೀವು ಕಾಣಬಹುದು.
ಹಲಸಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ವಿಟಮಿನ್‌ಗಳು, ಖನಿಜಗಳು ಮತ್ತು ಫೈಟೊಕೆಮಿಕಲ್‌ಗಳು ಸಮೃದ್ಧವಾಗಿವೆ. ಹಾಗಾಗಿ ಹಲಸು ತಿನ್ನುವುದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುತ್ತವೆ.
ಈಗ ಹಲಸಿನ ಹಣ್ಣು ತಿನ್ನುವುದರಿಂದಾಗುವ ಪ್ರಯೋಜನಗಳೇನು ಎನ್ನುವುದನ್ನು ತಿಳಿಯೋಣ.
1. ಶಕ್ತಿ ಸುಧಾರಣೆ
ಹಲಸು ಫ್ರಕ್ಟೋಸ್ ಮತ್ತು ಸುಕ್ರೋಸ್‌ನಂತಹ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತವೆ. 92 ರಷ್ಟು ಹಲಸು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ. ಒಂದು ಕಪ್ ಹಲಸಿನ ಹಣ್ಣಿನಲ್ಲಿ ಸುಮಾರು 40 ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ. ಹಾಗಾಗಿ ಹಲಸಿನ ಹಣ್ಣನ್ನು ತಿಂದರೆ ದೇಹಕ್ಕೆ ಬೇಕಾಗುವ ಶಕ್ತಿ ಸಿಗುತ್ತದೆ ಮತ್ತು ದೀರ್ಘ ಕಾಲ ಶಕ್ತಿಯುತವಾಗಿ ಕೆಲಸ ಮಾಡಬಹುದು.
2. ಥೈರಾಯ್ಡ್ ಸಮಸ್ಯೆಗಳಿಗೆ ಪರಿಹಾರ
ಹಲಸಿನ ಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳಿವೆ. ಅವು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದು ಥೈರಾಯ್ಡ್ ಹಾರ್ಮೋನ್ಗಳ ಸುಗಮ ಕಾರ್ಯನಿರ್ವಹಣೆ ಮತ್ತು ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗಾಗಿ ಹಲಸು ತಿನ್ನುವುದರಿಂದ ಥೈರಾಯ್ಡ್ ಸಮಸ್ಯೆ ತಡೆಯಬಹುದು.

3. ಕಡಿಮೆ ರಕ್ತದೊತ್ತಡ
ಒಂದು ಕಪ್ ಹಲಸಿನ ಹಣ್ಣು ದೈನಂದಿನ ಪೊಟ್ಯಾಸಿಯಮ್ ಅವಶ್ಯಕತೆಯ 14% ಅನ್ನು ಒದಗಿಸುತ್ತದೆ. ಹಲಸಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುವ ಕಾರಣ, ಇದು ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ.
4. ಜೀರ್ಣಕ್ರಿಯೆಗೆ ಒಳ್ಳೆಯದು
ಹಲಸಿನ ಹಣ್ಣಿನಲ್ಲಿ ನಾರಿನಂಶ ಮತ್ತು ನೀರಿನಂಶ ಅಧಿಕವಾಗಿದೆ. ಹೀಗಾಗಿ ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಾಂಗ ಕಾರ್ಯಯನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇರುವವರು ಹಲಸಿನ ಹಣ್ಣನ್ನು ತಿನ್ನುವುದನ್ನು ರೂಢಿಸಿಕೊಂಡರೆ ಒಳ್ಳೆಯದು.
5. ಕಣ್ಣುಗಳಿಗೆ ಒಳ್ಳೆಯದು
ಹಲಸಿನ ಹಣ್ಣಿನಲ್ಲಿ ಫ್ಲೇವನಾಯ್ಡ್‌ಗಳು ಮತ್ತು ಫೀನಾಲ್‌ಗಳಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಮುಕ್ತ ಆಮ್ಲಜನಕ ರಾಡಿಕಲ್ಗಳಿಂದ ಜೀವಕೋಶಗಳ ಡಿಎನ್ಎ ಹಾನಿಯನ್ನು ತಡೆಯುತ್ತದೆ. ಹಲಸಿನ ಹಣ್ಣಿನಲ್ಲಿ ಮುಖ್ಯವಾಗಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯಕ್ಕೆ ಅವಶ್ಯಕವಾಗಿದೆ. ಆದ್ದರಿಂದ ಹಲಸಿನ ಹಣ್ಣನ್ನು ಸೇವಿಸುವುದರಿಂದ ದೃಷ್ಟಿ ಸಮಸ್ಯೆಗಳನ್ನು ತಡೆಯಬಹುದು.
6. ಕ್ಯಾನ್ಸರ್ ತಡೆ
ಹಲಸಿನ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳಲ್ಲಿನ DNA ಹಾನಿಯನ್ನು ತಡೆಯುತ್ತದೆ ಮತ್ತು ಹಾನಿಗೊಳಗಾದ ಜೀವಕೋಶಗಳು ರೂಪಾಂತರಗೊಳ್ಳುವುದನ್ನು ತಡೆಯುತ್ತದೆ. ಅಲ್ಲದೆ ಹಲಸಿನ ಹಣ್ಣಿನಲ್ಲಿ ಹೆಚ್ಚಿನ ಪಿಷ್ಟ ಮತ್ತು ಹೆಚ್ಚಿನ ಸ್ನಿಗ್ಧತೆ ಇರುವುದರಿಂದ ಇದನ್ನು ಸೇವಿಸಿದಾಗ ಕರುಳಿನ ಕ್ಯಾನ್ಸರ್‌ಗೆ ಸಂಬಂಧಿಸಿದ ವಿಷವನ್ನು ಕರುಳಿನಿಂದ ಸಂಪೂರ್ಣವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ಕರುಳಿನ ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ.
7. ರಕ್ತಹೀನತೆಗೆ ಪರಿಹಾರ
ರಕ್ತಹೀನತೆಯು ದೇಹದಲ್ಲಿನ ಕೆಂಪು ರಕ್ತ ಕಣಗಳು ಮತ್ತು ಹಿಮೋಗ್ಲೋಬಿನ್ ಕೊರತೆಯಿಂದ ಉಂಟಾಗುವ ಸ್ಥಿತಿಯಾಗಿದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ವಿಟಮಿನ್ ಬಿ6, ನಿಯಾಸಿನ್ ಮತ್ತು ಫೋಲಿಕ್ ಆಮ್ಲವಿದೆ. ಜೊತೆಗೆ ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಗತ್ಯವಾದ ಪೋಷಕಾಂಶಗಳಾದ ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ತಾಮ್ರವನ್ನು ಹೊಂದಿರುತ್ತದೆ. ಆದ್ದರಿಂದ ಹಲಸಿನ ಹಣ್ಣನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ಸರಿಪಡಿಸಬಹುದು ಮತ್ತು ತಡೆಯಬಹುದು.

8. ಮೂಳೆಗಳಲ್ಲಿ ಬಲ
ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಅತ್ಯಗತ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಕ್ಯಾಲ್ಸಿಯಂ ಹಾಲಿನಲ್ಲಿ ಮಾತ್ರವಲ್ಲ. ಹಲಸಿನ ಹಣ್ಣಿನಲ್ಲೂ ಇದೆ. ಒಂದು ಹಿಡಿ ಹಲಸಿನ ಹಣ್ಣಿನಲ್ಲಿ ಸುಮಾರು 56.1 ಮಿಗ್ರಾಂ ಕ್ಯಾಲ್ಸಿಯಂ ಇದೆ. ಇದು ದೈನಂದಿನ ಕ್ಯಾಲ್ಸಿಯಂ ಅವಶ್ಯಕತೆಯ 6%ರಷ್ಟು ಆಗಿದೆ. ಹಾಗಾಗಿ ಹಲಸಿನ ಹಣ್ಣು ತಿನ್ನುವುದರಿಂದ ಮೂಳೆ ಸಮಸ್ಯೆಗಳು ಬರುವುದಿಲ್ಲ ಮತ್ತು ಮೂಳೆಗಳು ಬಲಗೊಳ್ಳುತ್ತವೆ.
9. ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ
ಆಯುರ್ವೇದದ ಪ್ರಕಾರ, ಚೆನ್ನಾಗಿ ಮಾಗಿದ ಹಲಸು ಬಂಜೆತನದ ಪುರುಷರಲ್ಲಿ ವೀರ್ಯ ಚಲನಶೀಲತೆ ಮತ್ತು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕ ಚೀನೀ ಔಷಧದಲ್ಲಿ, ಹಲಸು ಅತ್ಯುತ್ತಮ ಕಾಮೋತ್ತೇಜಕ ಹಣ್ಣುಗಳಲ್ಲಿ ಒಂದಾಗಿದೆ. ಕಡಿಮೆ ಕಾಮಾಸಕ್ತಿ ಹೊಂದಿರುವ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಚಿಕಿತ್ಸೆ ನೀಡಲು ಪ್ರಾಚೀನ ಕಾಲದಿಂದಲೂ ಇದನ್ನು ಬಳಸಲಾಗುತ್ತದೆ. ಆದ್ದರಿಂದ ಉತ್ತಮ ಲೈಂಗಿಕ ಜೀವನವನ್ನು ಹೊಂದಲು ಬಯಸುವ ಪುರುಷರು ಹಲಸಿನ ಹಣ್ಣುಗಳನ್ನು ತಿನ್ನಬೇಕು.
10. ಚರ್ಮದ ಆರೋಗ್ಯ ಸುಧಾರಣೆ
ಹಲಸಿನ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ, ಇದರ ಸೇವನೆಯು ಚರ್ಮದ ಕೋಶಗಳ ಹಾನಿಯನ್ನು ತಡೆಯುತ್ತದೆ, ಚರ್ಮದ ಅಕಾಲಿಕ ವಯಸ್ಸನ್ನು ತಡೆಯುತ್ತದೆ ಮತ್ತು ಚರ್ಮದ ಆರೋಗ್ಯ ಮತ್ತು ಯೌವನದ ನೋಟವನ್ನು ಹೆಚ್ಚಿಸುತ್ತದೆ.