ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಾವು ಬದಲಾವಣೆ ಬಯಸುತ್ತೇವೆ ಆದರೆ ಸ್ವತಃ ಬದಲಾಗುವದಿಲ್ಲ,ಉಪದೇಶ ಮಾಡುತ್ತೇವೆ ನಮ್ಮ ಮನ ಅವಲೋಕನ ಮಾಡುವುದಿಲ್ಲ,ಆಚಾರ ವಿಚಾರದಲ್ಲೂ ಲಾಭ ನಷ್ಟಗಳ ಲೆಕ್ಕ ಹಾಕುವ ಕಾಲಮಾನ ಇದು.ಆದರೆ, ಇತಿಹಾಸದಲ್ಲಿ ಇಂತಹ ಮನಸ್ಸುಗಳಿಗೆ ಜಾಗವಿಲ್ಲ. ಇದು ಕೇವಲ ಈಗಿನ ಕಥೆ ಅಲ್ಲ ಅನಾದಿಕಾಲದಿಂದಲೂ ಮಾನವಜೀವನದ ಮೇಲೆ ಪ್ರಭಾವ ಬೀರುವ ಭಾವನೆಗಳ ಸಂತೆ. ಈ ಸಂತೆಯಲ್ಲಿ ಮಾನವಕೂಲಕ್ಕೆ ಒಳಿತು ಮಾಡಲು ಸಾಕಷ್ಟು ಮಹನೀಯರು ತಮ್ಮ ತನು ಮನದಿಂದ ತಮ್ಮನ್ನು ಅರ್ಪಿಸಿ ಕೊಂಡಿದ್ದಾರೆ ಅಂತಹ ಮಹಾನುಭಾವರಲ್ಲಿ ೧೨ ಶತಮಾನದಲ್ಲಿ ನಮ್ಮ ಕರುನಾಡಿನ ಪುಣ್ಯ ಭೂಮಿಯಲ್ಲಿ ಜನಿಸಿದ ಬಸವಣ್ಣನವರು ಒಬ್ಬರು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಹೇಳಿದರು. ಅವರು ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮೌಲ್ಯಯುತ ಜೀವನಕೆ ವಚನ ಸಹಕಾರಿಯಾಗಿದೆ, ಬಸವಣ್ಣನವರು ೧೨ ನೇ ಶತಮಾನದಲ್ಲಿ ಬರೆದ ವಚನಗಳಲ್ಲಿ ಸ್ವಾಸ್ಥ್ಯ ಸಮಾಜಕ್ಕೆ ಹತ್ತಿರವಾಗಿವೆ ಎಂದರು. ಕಳಬೇಡ ಕೊಲಬೇಡ,ಹುಸಿಯ ನುಡಿಯಲು ಬೇಡ,ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ,ಇದಿರು ಹಳಿಯಲು ಬೇಡ,ಇದೆ ಅಂತರಂಗ ಶುದ್ಧಿ ಇದೆ ಬಹಿರಂಗ ಶುದ್ಧಿ,ಇದೆ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ!!
ಈ ಮೇಲಿನ ವಚನವನ್ನು ಬಾಲ್ಯದಿಂದ ಪಠಿಸುತ್ತ ಬೆಳೆದವರು ನಾವೆಲ್ಲರು. ಮಾನವ ಸಮುದಾಯಕ್ಕೆ ಮಾನವಿಯತೆಯ ನೆಲೆಯಲಿ ನೀತಿ ಸಂಹಿತೆ ರಚಿಸಿದ ಅದ್ಭುತ ವಚನವಿದು. ಅಹಿಂಸೆಯ ದಾರಿಯಲ್ಲಿ,ಅಕ್ಷರ ಅರಿವಿನ ಮೂಲಕ ಮಾನವಕೂಲಕ್ಕೆ ೧೨ ಶತಮಾನದಲ್ಲಿ ಭಕ್ತಿ ಭಂಡಾರಿಯ ಎದೆಗೂಡಲ್ಲಿ ಮೂಡಿದ ಈ ವಚನ ನಮ್ಮ ಮನಸ್ಸಿಗೆ ಕಾನೂನಿನ ಚೌಕಟ್ಟು ವಿಧಿಸಿ ಬದುಕು ಹಸನುಗೊಳಿಸುವ ಅರಿವಿನ ಜ್ಞಾನವಾಗಿದೆ ಎಂದರೆ ತಪ್ಪಾಗದು. ಈ ಮೇಲಿನ ವಚನದ ಸಾಲುಗಳು ನಮ್ಮ ಜೀವನದ ಅನುಕರಣೆ ಆದರೆ ಸ್ವಸ್ಥ ಸಮಾಜದ ನಿರ್ಮಾಣದ ಕನಸು ನನಸಾಗದೆ ಇರದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾ.ವೈಭವಿನಟರಾಜ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೇಖಾ, ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಯೋಜನೆಯ ಡಾ.ದಿನೇಶ್, ಡಾ.ಅಂಬಿಕಾದಾಸ್, ಡಾ.ಮೋನಿಕಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪಾರ್ವತಿ.ಸಿಬ್ಬಂದಿಗಳಾದ ಪೂರ್ಣಿಮಾ, ಸವಿತ, ಬೇಬಿಮನು, ಚೇತನ್, ಮಹೇಶ್, ಜವರಯ್ಯ, ರಾಜೇಶ್, ಮೊದಲಾದವರು ಇದ್ದರು.