ಹೊಸದಿಲ್ಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ೪೮ ಸ್ಥಾನಗಳ ಪೈಕಿ ಬಹುತೇಕ ಕಡೆಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಭವಿಷ್ಯ ನುಡಿದಿದ್ದಾರೆ.
೨೦೧೯ರ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಕೆಲವೇ ಸ್ಥಾನಗಳನ್ನು ಇಲ್ಲಿ ಗೆಲ್ಲುವುದು ಸಾಧ್ಯವಾಗಿದ್ದರೂ ಈ ಬಾರಿ ಭರ್ಜರಿ ಜಯದ ಸೂಚನೆಗಳು ಕಾಣುತ್ತಿವೆ ಎಂದು ಎನ್ ಡಿಟಿವಿ ಜತೆ ಮಾತನಾಡಿದ ಅವರು ಹೇಳಿದರು. ೨೦೧೯ರ ಬಳಿಕ ಮಹಾರಾಷ್ಟ್ರದಲ್ಲಿ ರಾಜಕೀಯ ಬದಲಾವಣೆಗಳು ವ್ಯಾಪಕವಾಗಿ ನಡೆದಿದ್ದು, ಶಿವಸೇನೆ- ಬಿಜೆಪಿ ಮೈತ್ರಿ ಮುರಿದಿದೆ. ಬಳಿಕ ಮಹಾವಿಕಾಸ ಅಗಾಡಿ ಸ್ಥಾಪನೆಯಾಗಿದ್ದು, ಶಿವಸೇನೆ ಹಾಗೂ ನ್ಯಾಷನಲಿಸ್ಟ್ ಪಾರ್ಟಿಗಳು ವಿಭಜನೆಯಾಗಿವೆ. ಆದ್ದರಿಂದ ಮತದಾರರ ಒಲವು ತಿಳಿಯುವುದು ಅಷ್ಟೊಂದು ಸುಲಭವಲ್ಲ. ಆದರೆ ಸಾರ್ವಜನಿಕ ಸಭೆಗಳಲ್ಲಿ ಧನಾತ್ಮಕ ವಾತಾವರಣ ಕಾಣಿಸುತ್ತಿದೆ ಎಂದು ತರೂರ್ ಹೇಳಿದ್ದಾರೆ.
ಈ ಬಾರಿ ಉದ್ದವ್ ಠಾಕ್ರೆ ಬಣ ೨೧, ಎನ್ಸಿಪಿಯ ಪವಾರ್ ಬಣ ೧೦ ಹಾಗೂ ಕಾಂಗ್ರೆಸ್ ೧೭ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಎನ್ ಡಿಎ ಕೂಟದಲ್ಲಿ ಬಿಜೆಪಿ ೨೮, ಶಿವಸೇನೆಯ ಶಿಂಧೆ ಬಣ ೧೫ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಒಂದು ಸ್ಥಾನವನ್ನು ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ.