ಮೈಸೂರು: ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಕೇರ್ಗಳ್ಳಿಯ ಕುಂಬಾರಕಟ್ಟೆ ತುಂಬಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗಿರುವುದರಿಂದ ಮುಡಾ ಹಾಗೂ ಬೋಗಾದಿ ಪಟ್ಟಣ ಪಂಚಾಯ್ತಿ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ತಿಳಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಕೇರ್ಗಳ್ಳಿಯಲ್ಲಿರುವ ಕುಂಬಾರಕಟ್ಟೆಗೆ ಮಳೆಯಿಂದಾಗಿ ನೀರು ತುಂಬಿಕೊಂಡು ಅಕ್ಕಪಕ್ಕದ ಜಮೀನು ಹಾಗೂ ಕಟ್ಟಡಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಕೆ. ಮರೀಗೌಡ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ಬೋಗಾದಿ ಎಸ್‌ಬಿಎಂ ಕಾಲೋನಿಯಿಂದ ದೀಪಾನಗರ ಮೂಲಕ ಪೂರ್ಣಯ್ಯ ನಾಲೆ ಮುಖಾಂತರ ನಿಂಗರಾಜನಕಟ್ಟೆ, ನ್ಯಾಯಾಂಗ ಬಡಾವಣೆಗೆ ಬಂದು ಕುಂಬಾರಕಟ್ಟೆಗೆ ನೀರು ಬರುತ್ತಿತ್ತು. ಆದರೆ ಈಗ ಪೂರ್ಣಯ್ಯ ನಾಲೆ ಒತ್ತುವರಿಯಾಗಿ ಮುಚ್ಚಿಹೋಗಿರುವುದರಿಂದ ಎಲ್ಲಾ ನೀರು ಎಲ್ಲಂದರಲ್ಲಿ ಹಳ್ಳವಿರುವ ಕಡೆ ಹರಿದು ಹೋಗುತ್ತಿದೆ. ಕೆರೆ ಏರಿಯ ಮಣ್ಣನ್ನು ತೆಗೆದ ಮೇಲೆ ತೂಬು ಮುಚ್ಚಿ ಹೋಗಿದೆ.

ಈಗ ಕೆರೆ ಏರಿ ಅಭಿವೃದ್ಧಿಪಡಿಸಿ ತೂಬು ನಿರ್ಮಿಸಿ ಹೆಚ್ಚುವರಿ ನೀರು ಹರಿದು ಹೋಗಲು ಕಾಲುವೆ ನಿರ್ಮಿಸಿ ಕೆರೆ ಏರಿ ಮೇಲೆ ಸುರಕ್ಷಿತ ಸ್ಟೀಲ್ ಗಾರ್ಡ್ ನಿರ್ಮಿಸಲು ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೇರ್ಗಳ್ಳಿಯಿಂದ ಆರ್.ಆರ್. ನಗರ ಸೋಮನಾಥನಗರದ ಮೂಲಕ ೨೪ ಕೊಟಿ ವೆಚ್ಚದಲ್ಲಿ ಡ್ರೈನೇಜ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಎಲ್ಲಾ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಡಾ ಇ.ಇ. ನಾಗೇಶ್, ಬೋಗಾದಿ ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿ ಕುರಿಯಾಕೋಸ್, ಕೇರ್ಗಳ್ಳಿ ಬಸವೇಗೌಡ, ಹುಚ್ಚಪ್ಪ, ನಾಗಣ್ಣ, ಬಡಗಲಹುಂಡಿ ರವಿ, ಪ್ರಕಾಶ್, ಗ್ರಾಮಸ್ಥರು ಹಾಜರಿದ್ದರು.