Sunday, April 20, 2025
Google search engine

HomeUncategorizedಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು: ಸಚಿವ ಬೋಸ್ ರಾಜು

ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು: ಸಚಿವ ಬೋಸ್ ರಾಜು


ಮೈಸೂರು: ಸಣ್ಣ ನೀರಾವರಿ ಇಲಾಖೆಯ ಎಲ್ಲಾ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣ ಆಗುವುದರ ಜತೆಗೆ ಗುಣಮಟ್ಟ ಕಾಪಾಡಿಕೊಳ್ಳಬೇಕು. ಕಾಗದದ ಮೇಲಿನ ಪ್ರಗತಿಯನ್ನು ಒಪ್ಪಲು ಸಾಧ್ಯವಿಲ್ಲ. ವಾಸ್ತವದ ನೆಲೆಯಲ್ಲಿ ಪ್ರಗತಿ ಆಗಬೇಕು. ಇಲ್ಲದಿದ್ದರೆ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಬೋಸ್ ರಾಜು ತಾಕೀತು ಮಾಡಿದರು.
ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಇಲಾಖೆ ಇಂಜಿನಿಯರ್‌ಗಳಿಗೆ ಸ್ಥಳಕ್ಕೆ ನಿರಂತರವಾಗಿ ಭೇಟಿ ನೀಡಿದರೆ ಸಮಸ್ಯೆಯ ವಾಸ್ತವದ ಸ್ಥಿತಿಗತಿ ತಿಳಿಯುತ್ತದೆ. ಜತೆಗೆ ಪರಿಹಾರ ಕಂಡು ಹಿಡಿಯಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.
ತಮಗೆ ನೀಡುವ ಮಾಹಿತಿ ವಾಸ್ತವತೆಯಿಂದ ಕೂಡಿರಬೇಕು. ಕಾಗದ ಮೇಲಿನ ಅಂಕಿ ಅಂಶಗಳನ್ನು ನಂಬುವುದಿಲ್ಲ. ಮಳೆಗಾಲ ಆರಂಭವಾಗಿದ್ದು ಕೆರೆಗಳ ದುರಸ್ತಿ ಕೆಲಸ ತ್ವರಿತವಾಗಿ ಆಗಬೇಕು. ಕೆರೆಗಳು ಒಡೆದರೆ ಬಡ ರೈತರಿಗೆ ತೊಂದರೆಯಾಗುತ್ತದೆ. ಕೆರೆ ಕಟ್ಟೆಗಳು ಮತ್ತು ಏತ ನೀರಾವರಿ ಮೂಲಕ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸಬೇಕು. ಸರ್ಕಾರ ಮತ್ತು ಇಲಾಖೆ ನಡುವೆ ಸಮನ್ವಯತೆ ಇದ್ದರೆ ಮಾತ್ರ ಸುಲಭವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯ. ಹಿಂದೆ ತಪ್ಪುಗಳು ಆಗಿದ್ದರೆ ಸರಿಪಡಿಸಿಕೊಂಡು ಹೋಗಬೇಕು. ವಿಶೇಷ ಘಟಕ ಯೋಜನೆ ಅಡಿ ಅಂತರ್ಜಲ ಅಭಿವೃದ್ಧಿ ಮತ್ತು ಏತ ನೀರಾವರಿ ಯೋಜನೆಗಳ ಪುನರ್ಜೀವನಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ಬಗ್ಗೆ ನಿರ್ಲಕ್ಷ ಸಲ್ಲುದು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.
ಬಿಲ್ ಪಾವತಿ: ಈಗ ತಮ್ಮ ಇಲಾಖೆಯಿಂದ ಸಾವಿರಾರು ಕೋಟಿ ರೂಪಾಯಿ ಯೋಜನಾ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ನಡುವೆ ಹೊಸ ಯೋಜನೆಗಳನ್ನು ಆರಂಭಿಸಬೇಕಿದೆ. ಬಾಕಿ ಬಿಲ್ ಅನ್ನು ಜೇಷ್ಠತೆ ಮೇರೆಗೆ ವ್ಯವಸ್ಥಿತವಾಗಿ ನೀಡಬೇಕು. ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯ ಇಂಜಿನಿಯರ್‌ಗೆ ಸೂಚಿಸಿ, ವಸ್ತು ಸ್ಥಿತಿಯಿಂದ ಕುಡಿದ ವರದಿ ನೀಡಬೇಕು. ಕಠಿಣ ಸಮಸ್ಯೆ ಇದ್ದರೆ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಕಾಮಗಾರಿಗಳ ಬಿಲ್ ಪಾವತಿ ಪಾರದರ್ಶಕವಾಗಿರಬೇಕು. ಹೊಸ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಜನರ ನಿರೀಕ್ಷೆಯಂತೆ ನೆಲಮಟ್ಟದ ಸಮಸ್ಯೆ ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ರಾಘವನ್, ಅಧೀಕ್ಷಕ ಇಂಜಿನಿಯರ್ ಕಿಶೋರ್ ಮತ್ತು ಮಂಗಳೂರು, ಹಾಸನ, ಮೈಸೂರು, ಚಿಕ್ಕಮಂಗಳೂರು, ಚಾಮರಾಜನಗರ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ವರ್ಗಾವಣೆಗೆ ನನ್ನ ಬಳಿ ಬನ್ನಿ
ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ನನ್ನ ಬಳಿಗೆ ಬನ್ನಿ. ಅನುಕೂಲ ಮಾಡಿಕೊಡೋಣ. ಆದರೆ ಈ ವಿಚಾರದಲ್ಲಿ ಮಧ್ಯವರ್ತಿಗಳು ಬೇಡ. ಏನೇ ಸಮಸ್ಯೆ ಇದ್ದರೂ ಕೂಡ ನನ್ನ ಬಳಿಯೇ ಹೇಳಿ ಎಂದು ಇಲಾಖೆ ಇಂಜಿನಿಯರ್‌ಗಳಿಗೆ ಸಣ್ಣ ನೀರಾವರಿ ಇಲಾಖೆ ಸಚಿವ ಬೋಸರಾಜು ಕಿವಿಮಾತು ಹೇಳಿದರು.

RELATED ARTICLES
- Advertisment -
Google search engine

Most Popular