ಮೈಸೂರು: ಸಮಗ್ರ ಕರ್ನಾಟಕ ಕನ್ನಡ, ಕನ್ನಡಿಗರ ಸಂರಕ್ಷಣೆಗೆ ಆಗ್ರಹಿಸಿ ಕದಂಬ ಸೈನ್ಯ ಕನ್ನಡ ಸಂಘಟನೆಯವರು ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟಿಸಿದರು.
ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಸದನದಲ್ಲಿ ಮಂಡಿಸಿ ಕಾಯ್ದೆಯಾಗಿ ಜಾರಿಗೆ ತರಬೇಕು. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಸಂಪೂರ್ಣವಾಗಿ ನಿಲ್ಲಿಸಬೇಕು. ದ್ವಿಭಾಷಾ ನೀತಿ ಜಾರಿಗೆ ತರಬೇಕು. ಪ್ರಥಮ ಭಾಷೆ ಆಗಿ ಕನ್ನಡ, ೨ನೇ ಭಾಷೆಯಾಗಿ ಇಂಗ್ಲಿಷ್ ಕಲಿಸಬೇಕು. ಆದರೆ, ಹಿಂದಿ ಕಲಿಕೆ ಅಗತ್ಯ ಇಲ್ಲ. ತ್ರಿಭಾಷಾ ಸೂತ್ರ ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಕನ್ನಡ ಕಲಾವಿದರು, ಕ್ರೀಡಾಪಟುಗಳಿಗೆ ಆರ್ಥಿಕ ಪ್ರೋತ್ಸಾಹ ನೀಡಬೇಕು. ಪಠ್ಯ ಪುಸ್ತಕದಲ್ಲಿ ಕನ್ನಡ ನಾಡಿನ ಮಹಾಕವಿಗಳು, ನಾಡು-ನುಡಿ ಕನ್ನಡ ಹಿರಿಮೆಯನ್ನು ಪರಿಚಯಿಸಬೇಕು. ಗುಜರಾತಿನ ಅಮೂಲ್ ಸಂಸ್ಥೆಯಲ್ಲಿ ಕೆಎಂಎಫ್ ವಿಲೀನ ಕೈಬಿಡಬೇಕು. ಬನವಾಸಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡಬೇಕು. ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಪ್ರತಿಮೆಯನ್ನು ವಿಧಾನಸೌಧದ ಮುಂದೆ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಪದಾಧಿಕಾರಿಗಳಾದ ಎಸ್.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ಬಿ.ಶಿವಕುಮಾರ್, ನಾ.ಮಹದೇವಸ್ವಾಮಿ, ರಾಮು, ಮಹದೇವು ಮೊದಲಾದವರು ಇದ್ದರು.