ಮಂಗಳೂರು(ದಕ್ಷಿಣ ಕನ್ನಡ): ದ.ಕ. ಜಿಲ್ಲೆಯು ಪ್ರಸಕ್ತ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿರುವ ಬಗ್ಗೆ ದಕ್ಷಿಣ ಕನ್ನಡ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಪ್ರತಿಕ್ರಿಯಿಸಿ, ಪಿಯುಸಿಯಲ್ಲಿ ಪ್ರಥಮ ಹಾಗೂ ಎಸೆಸೆಲ್ಸಿಯಲ್ಲಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಈ ಬಾರಿ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಇಲಾಖೆಯ ಮೂಲಕ ಮಾಡಲಾಗಿತ್ತು. ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ ಹಿಂದಿನ ವರ್ಷದಲ್ಲಿ ಶಾಲೆಗಳಲ್ಲಿ ದೊರಕಿದ ಫಲಿತಾಂಶವನ್ನು ಪರಾಮರ್ಶಿಸಿ ಎ, ಬಿ ಮತ್ತು ಸಿ ವಿಭಾಗವಾಗಿ ವರ್ಗೀಕರಿಸಲಾಗಿತ್ತು. ಸಿ ವಿಭಾಗದ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಅಲ್ಲಿನ ಶಿಕ್ಷಕರು, ವಿಷಯದ ಕುರಿತಾದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಯಾವ ವಿಷಯದಲ್ಲಿ ಯಾವ ಶಾಲೆ ಕಡಿಮೆ ಫಲಿತಾಂಶವನ್ನು ಪಡೆದಿದೆ ಎಂದು ಗುರುತಿಸಿ, ಆ ಶಾಲೆಗಳಲ್ಲಿ ವಿಶೇಷ ಕಾಳಜಿ ವಹಿಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಒಂದು ಗಂಟೆ ವಿಶೇಷ ತರಬೇತಿ ನೀಡುವ ಕಾರ್ಯ ನಡೆಸಲಾಗಿತ್ತು. ಈ ಮೂಲಕ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಈ ಮೂಲಕ ಕಳೆದ ಬಾರಿಯ 17ನೆ ಸ್ಥಾನದಿಂದ ಈ ಬಾರಿ 2ನೆ ಸ್ಥಾನಕ್ಕೇರಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಇಲಾಖೆ, ಶಿಕ್ಷಕರ ಜತೆ ಪೋಷಕರಪಾತ್ರವೂ ಪ್ರಮುಖವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.