ಮದ್ದೂರು: ಮದ್ದೂರು ಪಟ್ಟಣದ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದೇ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಾಗೂ ಪ್ರಗತಿಪರ ಸಂಘಟನೆಗಳು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮದ ಸಿದ್ದಮ್ಮ(45) ಮೃತ ಮಹಿಳೆ.
ಗಂಟಲು ನೋವು ಎಂದು ಸಿದ್ದಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಾವುದೋ ಪೌಡರ್ ಕುಡಿಸಿದ್ದರು ಸಂಜೆ ವೇಳೆಗೆ ಅಸ್ವಸ್ಥರಾಗಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯ ಎಂದು ಗ್ರಾಮಸ್ಥರು ಆರೋಪಿಸಿದ್ದು, ಅಕಾಲಿಕ ಸಾವಿಗೆ ಕಾರಣರಾದರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಕೆ. ಎಸ್. ಸೋಮಶೇಖರ್ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಹಾಸ್ಪಿಟಲ್ ಸಿಬ್ಬಂದಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ತಹಶಿಲ್ದಾರ್ ಮುಂದಾಗಿದ್ದು, ಮುಂಜಾಗ್ರತ ಕ್ರಮವಾಗಿ ಪ್ರತಿಭಟನಾ ಸ್ಥಳದಲ್ಲೇ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಆಸ್ಪತ್ರೆ ವೈದ್ಯರು ಮೃತ ಕುಟುಂಬಸ್ಥರಿಗೆ 8 ಲಕ್ಷ ಪರಿಹಾರ ನೀಡಲು ಒಪ್ಪಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.