ಮೈಸೂರು: ಬಡವರಿಗೆ ತಿಂಗಳಿಗೆ ೧೦ ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಕೊಕ್ಕೆ ಹಾಕಿದೆ ಎಂದು ಸಚಿವ ಬೋಸರಾಜು ಕೇಂದ್ರದ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇದೆ. ಅದರಲ್ಲಿ ಹೆಚ್ಚುವರಿ ಅಕ್ಕಿ ಕೊಡಿ ಎಂದು ಕೇಳಿದ್ದೇವೆ. ಮೋದಿಯವರ ಮನೆಯಿಂದ ಅಥವಾ ಇನ್ಯಾರೋ ಮನೆಯಿಂದ ಕೊಡುತ್ತಿಲ್ಲ. ರಾಜಕೀಯ ಕಾರಣಗಳಿಂದ ಅಕ್ಕಿ ಕೊಡುತ್ತಿಲ್ಲ ಅಷ್ಟೇ. ಕರ್ನಾಟಕದ ಬಡ ಜನರ ಬಗ್ಗೆ ಇವರಿಗಿರುವ ವಿರೋಧ ಕಣ್ಣಿಗೆ ಕಾಣುತ್ತಿದೆ. ನಾವು ಹೇಗಾದರು ಮಾಡಿ ಜನರಿಗೆ ಅಕ್ಕಿ ನೀಡಿ ಕೊಟ್ಟಿರುವ ಭರವಸೆ ಈಡೇರಿಸುತ್ತೇವೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ಗೌರವಸ್ಥರು, ದೊಡ್ಡನಾಯಕರಿದ್ದಾರೆ. ಅವರು ಈ ರೀತಿ ಮಾತನಾಡಬಾರದು. ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಕೊಡಿ ಎಂದು ಯಡಿಯೂರಪ್ಪ ಕೇಳಬೇಕು. ಶೋಭಾ ಕರಂದ್ಲಾಜೆ ಕೂಡ ಹೇಳಿಕೆ ನೀಡಿ ಗ್ಯಾರಂಟಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇವರು ಹೇಳಬೇಕಲ್ಲವೇ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಇದ್ದಾಗ ೭ ಕೆಜಿ ಅಕ್ಕಿ ಕೊಡುತ್ತಿದ್ದೆವು. ಅದನ್ನು ಇವರು ೫ಕೆಜಿ ಗೆ ತಂದರು. ಈಗ ನಾವು ೧೦ ಕೆಜಿ ಕೊಡುತ್ತೇವೆ ಎಂದು ಹೇಳಿದ್ದೇವೆ. ಅದಕ್ಕೆ ಇವರು ಸಹಕಾರ ಕೊಡಬೇಕಲ್ಲವೆ. ಈಗ ರಾಜ್ಯದಲ್ಲಿ ಬಿಜೆಪಿಯನ್ನು ಜನ ತಿರಸ್ಕಾರ ಮಾಡಿದ್ದಾರೆ. ಬದಲಾವಣೆ ಬಯಸಿ ಕಾಂಗ್ರೆಸ್‌ಗೆ ೧೩೫ ಸ್ಥಾನ ಕೊಟ್ಟಿದ್ದಾರೆ. ಇತ್ತೀಚಿನ ಕಾಲದಲ್ಲಿ ಯಾವುದೇ ಪಕ್ಷಕ್ಕೂ ಇಷ್ಟೊಂದು ಬಹುಮತ ಕೊಟ್ಟಿಲ್ಲ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹಲವು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದೆವು. ಅದರಲ್ಲಿ ತಕ್ಷಣ ೫ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದೇವೆ ಎಂದರು.
ಈಗಾಗಲೇ ಶಕ್ತಿ ಯೋಜನೆ ಆರಂಭವಾಗಿದೆ. ಶಕ್ತಿ ಯೋಜನೆಗೆ ಒಂದೇ ದಿನ ೧.೫ ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಿದ್ಧತೆ ನೀಡಿದೆ. ಆಪ್ ಕೂಡ ರೆಡಿ ಆಗಿದೆ. ನಾಳೆಯಿಂದ ಅರ್ಜಿ ಸಲ್ಲಿಕೆಗೆ ಚಾಲನೆ ಸಿಗಲಿದೆ. ಆಗಸ್ಟ್ ೧೫ರ ನಂತರ ಪಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತದೆ ಎಂದು ಹೇಳಿದರು.