ಚನ್ನಪಟ್ಟಣ: ಗ್ರಾಮಗಳ ಜನರ ನಡುವೆ ಸೌಹಾರ್ದತೆ ಬೆಳೆಯಲು ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಅಭಿಪ್ರಾಯಿಸಿದರು.
ತಾಲೂಕಿನ ಬೇವೂರು ಗ್ರಾಮದ ದಿವಂತ ಸಹದೇವ, ಬಿಎಸ್ ಮಧು, ಪುನೀತ್‌ಕುಮಾರ್, ಬಿ.ಟಿ.ರಾಘವೇಂದ್ರ, ಅಜಿತ್, ಬಿ.ಆರ್. ದಿನೇಶ್, ನಂಜೇಗೌಡರ ಸ್ಮರಣಾರ್ಥ ಎಸ್‌ಎಸ್‌ಆರ್ ಕ್ರಿಕೇಟರ್‍ಸ್ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಗ್ರಾಮಾಂತರ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿದ್ದು ಇದರ ಜೊತೆಗೆ ಒಂದು ಗ್ರಾಮದ ಜೊತೆಗೆ ಮತ್ತೊಂದು ಗ್ರಾಮದ ಜನರು ಸೌಹಾರ್ದ ಬಾಂಧವ್ಯ ಹೊಂದಲು ಪಂದ್ಯಾವಳಿಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಇಂತಹ ಪಂದ್ಯಾವಳಿಗಳನ್ನು ಆಯೋಜಿಸಲು ಆಯೋಜಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಕೆ ಮಧುಸೂಧನ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಪ್ರೋತ್ಸಾಹ ಸಿಕ್ಕರೆ ಅವರು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ವೇದಿಕೆ ಸಿಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಬ್ಬಡ್ಡಿ, ಕ್ರಿಕೇಟ್ ನಂತಹ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜನೆ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ವಿವಿಧ ತಂಡಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು. ಕೊನೆಗೆ ಹೊಂಬೆಗೌಡನದೊಡ್ಡಿಯ ಯುವಕರ ತಂಡ ಟೂರ್ನಿಮೆಂಟ್‌ನ ಪ್ರಥಮ ಬಹುಮಾನ ಪಡೆದು ೩೩.೩೩೩ ರೂ ನಗದು ಮತ್ತು ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡರು.
ಬೇವೂರು ಗ್ರಾಮದ ಯುವಕರ ತಂಡ ದ್ವಿತೀಯ ಬಹುಮಾನ ಪಡೆದು ೨೨.೨೨೨ ರೂ. ನಗದು ಪಡೆದರು. ಮಾಗನೂರು ಗ್ರಾಮದ ತಂಡ ತೃತೀಯ ಸ್ಥಾನ ಪಡೆದು ೪.೪೪೪ ರೂ. ನಗದು ಪಡೆದರು. ಮೊಟ್ಟೆಗೌಡನದೊಡ್ಡಿ ಗ್ರಾಮದ ತಂಡ ನಾಲ್ಕನೇ ಬಹುಮಾನ ಪಡೆದು ೨.೨೨೨ ರೂ ನಗದು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ನಿರ್ದೇಶಕ ಶಿವಕುಮಾರ್, ರೈತ ಮುಖಂಡ ಶಿವಮಾದು, ಬಿಜೆಪಿ ಮುಖಂಡರಾದ ನಂದೀಶ್, ಸುನಿಲ್, ಕ್ರೀಡಾಕೂಟದ ವ್ಯವಸ್ಥಾಪಕರಾದ ಅರುಣ್ ಕುಮಾರ್, ಸತೀಶ್, ಅಭಿಷೇಕ್, ಜಿತೇಂದ್ರ ಕುಮಾರ್ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.