ರಾಮನಗರ: ಮುಂಬರುವ ಮುಂಗಾರಿನಲ್ಲಿ ಸಂಭವಿಸಬಹುದಾದ ವಿವಿಧ ರೀತಿಯ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಮೇ ೧೮ರ ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆಯ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಕೆರೆಗಳ ಆವರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸೋರಿಕೆ ಇದ್ದಲ್ಲಿ ಅದನ್ನು ತಡೆಗಟ್ಟಲು ಸಣ್ಣ ನೀರಾವರಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕರೆಗಳಲ್ಲಿರುವ ತ್ಯಾಜ್ಯ, ಕಲ್ಮಶಗಳು, ಮರಗಳ ರೆಂಬೆಕೊಂಬೆಗಳನ್ನು ವಿಲೇವಾರಿ ಮಾಡಬೇಕು ಎಂದರು. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮನವರಿಕೆ ಮಾಡಿ, ಅವರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಚರಂಡಿ, ಚಾಲನ್‌ಗಳಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿದು ಹೋಗಲು ಕ್ರಮವಹಿಸಬೇಕು. ಚರಂಡಿಗಳಲ್ಲಿ ಯಾವುದೇ ದುರಸ್ಥಿ ಇದ್ದಲ್ಲಿ ಅವುಗಳನ್ನು ಸಕಾಲದಲ್ಲಿ ನಿರ್ವಹಿಸಬೇಕು ಎಂದು ತಿಳಿಸಿದರು.
ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದ್ದು, ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸೊಳ್ಳೆಗಳು ಹೆಚ್ಚಾಗಿರುವ ಪ್ರದೇಶಗಳಿಗೆ ಫಾಗಿಂಗ್ ಮಾಡಿಸುವಂತೆ ಅವರು ತಿಳಿಸಿದರು. ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಈ ಹಿಂದೆ ಸಮಸ್ಯೆಗೆ ಸಿಲುಕಿದ್ದ ಸ್ಥಳಗಳನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ನಿಯಂತ್ರಣ ಅಸಾಧ್ಯ, ಯಾವುದೇ ಸಿದ್ಧತೆ ಮಾಡಿಕೊಳ್ಳದೆ ನಿರ್ಲಕ್ಷ ವಹಿಸದಂತೆ ಅವರು ತಿಳಿಸಿದರು.
ಪ್ರವಾಹ ಉಂಟಾಗುವ ಸ್ಥಳಗಳ ಸಂತ್ರಸ್ಥರಿಗೆ ಸೂಕ್ತ ರಕ್ಷಣೆಗೆ ಕಾಳಜಿ ಕೇಂದ್ರಗಳನ್ನು ತೆರೆಬೇಕಿದ್ದು, ಅಧಿಕಾರಿಗಳು ಸೂಕ್ತ ಸ್ಥಳಗಳನ್ನು ಗುರುತಿಸಿ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ತಿಳಿಸಿದರು. ಪ್ರಾಕೃತಿಕ ವಿಕೋಪದ ಕುರಿತು ಮಾಹಿತಿ ಪಡೆಯಲು ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ಜೀವ ಹಾನಿ ಹಾಗೂ ಬೆಳೆ ಹಾನಿ ಕುರಿತು ಮಾಹಿತಿ ಬಂದಲ್ಲಿ ಸಂಬಂಧಿಸಿದ ತಾಲ್ಲೂಕುಗಳ ತಹಶೀಲ್ದಾರರು ಪರಿಹಾರ ಸೇರಿದಂತೆ ಕೂಡಲೇ ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಮಳೆಯಿಂದಾಗಿ ಸೋರುತ್ತಿದ್ದರೆ, ಅದನ್ನು ದುರಸ್ಥಿಗೊಳಿಸಬೇಕು, ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆದು, ಆರೋಗ್ಯ ತಪಾಸಣೆ ಮಾಡಬೇಕು ಹಾಗೂ ಔಷಧಗಳ ಅಗತ್ಯ ದಾಸ್ತಾನು ಇರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಎಂದರು.
ಮಳೆಯಿಂದಾಗಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳಿದ್ದರೆ ಬೆಸ್ಕಾಂ ಅಧಿಕಾರಿಗಳು ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕು. ವಿಪರೀತ ಮಳೆಯಿಂದಾಗಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಕ್ರಮವಹಿಸಬೇಕು. ವಿದ್ಯುತ್ ತಂತಿಗಳಿಗೆ ಆವರಿಸಿಕೊಂಡಿರುವ ಅಪಾಯಕಾರಿ ಮರಗಳ ರೆಂಬೆಕೊಂಬೆಗಳನ್ನು ತೆರವುಗೊಳಿಸುವಂತೆ ಅವರು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಪ್ರತಿ ತಾಲ್ಲೂಕು ತಹಶೀಲ್ದಾರರು ತಾಲ್ಲೂಕು ಹಂತದಲ್ಲಿ ಸಭೆಗಳನ್ನು ನಡೆಸಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡುವಂತೆ ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಉಪವಿಭಾಗಾಧಿಕಾರಿ ಬಿನೋಯ್, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಅಧಿಕಾರಿಗಳು ಉಪಸ್ಥಿತರಿದ್ದರು.