ಹೊಸದಿಲ್ಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾರೀ ಮಂಜಿನಿಂದ ಪರ್ವತ ಪ್ರದೇಶದಲ್ಲಿ ಪತನಗೊಂಡಿದ್ದು ರೈಸಿ ಮತ್ತು ವಿದೇಶಾಂಗ ಸಚಿವರು ನಿಧನರಾಗಿದ್ದಾರೆ ಎಂದು ಘೋಷಿಸಲಾಗಿದೆ.
ಹೆಲಿಕಾಪ್ಟರ್ ದಟ್ಟ ಮಂಜಿನಿಂದಾವೃತವಾದ ಪರ್ವತ ಪ್ರದೇಶವೊಂದರ ಮೇಲೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಹೆಲಿಕಾಪ್ಟರ್ ಪತ್ತೆಯಾದರೂ ಅದರಲ್ಲಿದ್ದ ಪ್ರಯಾಣಿಕರು ಜೀವಂತವಾಗಿರುವ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ, ಎಂದು ಇರಾನ್ ಸ್ಟೇಟ್ ಟಿವಿ ವರದಿ ಮಾಡಿದೆ. ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರು ಇರಾನ್‌ನ ತಬ್ರೀಝ್ ನಗರದಲ್ಲಿ ಆಝರ್‌ಬೈಜಾನ್ ನ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಜೊತೆಗೂಡಿ ಖಿಝ್ ಖಲಾಸಿ ಅಣೆಕಟ್ಟನ್ನು ಎರಡೂ ದೇಶಗಳು ಹಂಚಿರುವ ಗಡಿ ಸ್ಥಳದಲ್ಲಿ ಉದ್ಘಾಟಿಸಿ ವಾಪಸಾಗುತ್ತಿರುವಾಗ ಈ ಘಟನೆ ಸಂಭವಿಸಿದೆ.
ಹೆಲಿಕಾಪ್ಟರ್ ಪತನಗೊಂಡ ಸ್ಥಳದ ವೀಡಿಯೋ ಫುಟೇಜ್ ಕೂಡ ಲಭ್ಯವಾಗಿದೆ. ಹೆಲಿಕಾಫ್ಟರ್ ನಲ್ಲಿ ಅಧ್ಯಕ್ಷ ರಯೀಸಿ, ವಿದೇಶ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿ ಮತ್ತು ಇತರ ಅಧಿಕಾರಿಗಳಿದ್ದರು. ಹಾರಾಟ ಆರಂಭಿಸಿದ ಸುಮಾರು ೩೦ ನಿಮಿಷಗಳಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತ್ತು.
ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂಬ ಸುದ್ದಿಗಳ ಬೆನ್ನಲ್ಲಿ ೬೦ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕಠಿಣ ಹವಾಮಾನ ಪರಿಸ್ಥಿತಿಗಳ ನಡುವೆ ಶೋಧ ನಡೆಸಿದ್ದವು. ಇರಾನ್‌ನ ಸುದ್ದಿ ಸಂಸ್ಥೆ ಐಆರ್‌ಎನ್ ಎ ಅಧ್ಯಕ್ಷರ ಪತನಗೊಂಡ ಹೆಲಿಕಾಪ್ಟರ್ ಫುಟೇಜ್ ಬಿಡುಗಡೆಗೊಳಿಸಿದೆ.