ಬೆಂಗಳೂರು: ಹೊಳೆ ನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಕುರಿತ ೪೨ನೇ ಎಸಿಎಂಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ಇಂದು ಸೋಮವಾರ ನಡೆಯಲಿದ್ದು, ರೇವಣ್ಣಗೆ ಮತ್ತೆ ಜೈಲಾ ಅಥವಾ ಬೇಲಾ ಅನ್ನೋದು ಇಂದು ತೀರ್ಮಾನವಾಗಲಿದೆ.
ಶುಕ್ರವಾರ ಎರಡೂ ಬದಿಯ ವಕೀಲರ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು, ಇಂದಿಗೆ ಆದೇಶ ಕಾಯ್ದಿರಿಸಿದ್ದರು. ೪೭ ವರ್ಷದ ಮನೆ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ ೨೮ ರಂದು ಪ್ರಕರಣ ದಾಖಲಾಗಿತ್ತು. ಶಾಸಕರ ನಿವಾಸದಲ್ಲಿ ತಂದೆ ಮತ್ತು ಮಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು. ಬಳಿಕ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣವೂ ದಾಖಲಾಗಿತ್ತು.