ಮೈಸೂರು: ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್.ಬಿ ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರುಗಳೊಂದಿಗೆ ಶಾಂತಿ ಸಭೆ ನಡೆಸಿದರು.
ಜೂ.೨೯ರಂದು ಬಕ್ರೀದ್ ಹಬ್ಬದ ಆಚರಣೆಯ ಹಿನ್ನೆಲೆಯಲಿ ಈದ್ಗಾಗಳ ಬಳಿ ಸುಗಮ ಸಂಚಾರ ವ್ಯವಸ್ಥೆ ಕೈಗೊಳ್ಳುವ ಬಗ್ಗೆ, ಶಾಂತಿ & ಸೌಹಾರ್ಧತೆಯಿಂದ ಹಬ್ಬವನ್ನು ಆಚರಣೆ ಮಾಡುವ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳಿಗೆ ಆಸ್ಪದ ನೀಡದಂತೆ ಎರಡೂ ಸಮುದಾಯದ ಮುಖಂಡರುಗಳಿಗೆ ತಿಳಿಸಿದ್ದು, ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ಕಂಡು ಬಂದಲ್ಲಿ ಕಾನೂನಿನ ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.
ಸಭೆಯಲ್ಲಿ ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್.ಜಾಹ್ನವಿ, ನರಸಿಂಹರಾಜ, ದೇವರಾಜ, ಕೃಷ್ಣರಾಜ ಹಾಗೂ ವಿಜಯನಗರ ವಿಭಾಗಗಳ ಎಸಿಪಿಗಳು, ನರಸಿಂಹರಾಜ, ಮಂಡಿ, ಉದಯಗಿರಿ ಹಾಗೂ ಲಷ್ಕರ್ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರುಗಳು, ನಗರಪಾಲಿಕೆ ಸದಸ್ಯರುಗಳು ಹಾಜರಿದ್ದರು.