ಮೈಸೂರು: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಶ್ರಮಪಟ್ಟರೆ ಸಾಧನೆ ಮಾಡಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಕರೆ ನೀಡಿದರು.
ಕುವೆಂಪುನಗರದಲ್ಲಿರುವ ಡಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದ ೨೦೨೩-೨೪ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಸರ್ಕಾರದ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳೆಲ್ಲಾ ಸರ್ಕಾರಿ ಶಾಲೆ ಬಿ.ಸಿ.ಎಂ. ವಿದ್ಯಾರ್ಥಿನಿಲಯಗಳಲ್ಲಿ ಓದಿದಂತವರು. ಎಸ್.ಎಸ್.ಎಲ್.ಸಿ. ಫೇಲಾದವರು ಸಹ ಇಂದು ಉನ್ನತ ಹುದ್ದೆಯಲ್ಲಿದ್ದಾರೆ.
ಬಿ.ಸಿ.ಎಂ. ಹಾಸ್ಟೆಲ್‌ಗೆ ಬರುವ ವಿದ್ಯಾರ್ಥಿಗಳೆಲ್ಲಾ ಸಾಮಾನ್ಯವಾಗಿ ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿಗಳಾಗಿದ್ದು ಬಡತನದಿಂದ ಬಂದಿದವರಾಗಿದ್ದೀರಿ. ನಿಮ್ಮ ತಂದೆ ತಾಯಿಯವರು ನಿಮ್ಮನ್ನು ಕಷ್ಟಪಟ್ಟು ಓದಿಸಿದ್ದಾರೆ. ನಿಮ್ಮ ಮೇಲೆ ಅಪಾರ ವಿಶ್ವಾಸವಿಟ್ಟುಕೊಂಡಿದ್ದಾರೆ. ಆ ವಿಶ್ವಾಸಕ್ಕೆ ಧಕ್ಕೆ ಬರದ ಹಾಗೆ ನೋಡಿಕೊಳ್ಳಿರಿ. ಪದವಿ ಮುಗಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ನಿಲಯಪಾಲಕರಾದ ಜಗದೀಶ್‌ಕೋರಿ, ಪರಶುರಾಂ, ಯಶವಂತ್, ನಾಗರಾಜ್, ನಾಗರತ್ನ, ರಮ್ಯ, ತೇಜಸ್ವಿನಿ, ಯಶೋಧ, ಪರಮೇಶ್ವರಪ್ಪ, ಭಾಗ್ಯಲಕ್ಷ್ಮಿ, ವಸಂತ ಹಾಜರಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ. ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.