ಪಿರಿಯಾಪಟ್ಟಣ: ಸತತ ಹೋರಾಟದ ಫಲವಾಗಿ ಗ್ರಾಮಕ್ಕೆ ಡಾ. ಬಿಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಜಾಗ ದೊರಕಿದೆ ಎಂದು ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡ ಎಚ್‍ಡಿ ರಮೇಶ್ ತಿಳಿಸಿದರು.
ತಾಲೂಕಿನ ಈಚೂರು ಗ್ರಾಮದ ಸ ನಂ 3 ರಲ್ಲಿ 30 ಗುಂಟೆ ಸರ್ಕಾರಿ ಜಮೀನನ್ನು ಅತಿಕ್ರಮಿಸಿಕೊಂಡಿದ್ದನ್ನು ಅಳತೆ ಮಾಡಿ ತೆರವು ಮಾಡಿಸಿ ಸೋಮವಾರ ತಾಲೂಕು ಆಡಳಿತವು ಇಲ್ಲಿನ ದಲಿತರಿಗೆ ಬಿಡಿಸಿ ಕೊಟ್ಟ ಸಂದರ್ಭದಲ್ಲಿ ಮಾತನಾಡಿದರು.
ಒಂದುವರೆ ವರ್ಷಗಳ ಕಾಲ ಜಿಲ್ಲಾ ಮತ್ತು ಉಪ ವಿಭಾಗ ಅಧಿಕಾರಿಗಳ ಮುಂದೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರು ನೀಡಿದ ಸೂಚನೆ ಮೇರೆಗೆ ತಾಲೂಕು ತಹಸಿಲ್ದಾರ್ ಎನ್ ಎ ಕುಂಜ್ಞಿ ಅಹಮದ್ ರವರು ಈಚೂರು ಗ್ರಾಮದ ದಲಿತರಿಗೆ ಡಾ. ಬಿಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿ ಕೊಡುವಂತೆ ಆದೇಶ ಮಾಡಿದ್ದರು.
ಅದರಂತೆ ಈ ಜಾಗವನ್ನು ಅಂಬೇಡ್ಕರ್ ಸಮುದಾಯ ಭವನದ ನಿರ್ಮಾಣಕ್ಕೆ ಮೀಸಲಿಟ್ಟಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಮೇಶ್ ತಿಳಿಸಿದರು.
ದಲಿತ ಮುಖಂಡ ಸಿ ತಮಣ್ಣಯ್ಯ ಮಾತನಾಡಿ ಸಂಘಟನೆಗಳು ಜನಪರ ಹೋರಾಟದ ಫಲವಾಗಿ ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡರ ಸತತ ಹೋರಾಟದ ಫಲವಾಗಿ ಅಪಾರ ಬೆಲೆ ಬಾಳುವ ಮತ್ತು ಉತ್ತಮವಾದ ಜಾಗ ಡಾ.ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ದೊರಕಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಗಿರೀಶ್ ಮಾತನಾಡಿ ಉತ್ತಮವಾಗಿ ಕೆಲಸ ನಿರ್ವಹಿಸುವವರಿಗೆ ಬೆಂಬಲವನ್ನು ನೀಡಬೇಕು ಉತ್ತಮ ಸಾಮಾಜಿಕ ಸಮಾನತೆಗಾಗಿ ಹೋರಾಟಕ್ಕೆ ಭೀಮ್ ಆರ್ಮಿ ಬದ್ಧವಾಗಿದೆ ಅದರಲ್ಲೂ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆಯು ಶೋಷಿತರ ಪರವಾಗಿ ನಿಂತಿರುವ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮಾರ್ಮಿ ತಾಲೂಕು ಅಧ್ಯಕ್ಷ ಕಾಮರಾಜು. ಕೃಷ್ಣ ಗ್ರಾಮದ ಮುಖಂಡರಾದ ಪ್ರಕಾಶ್. ಶಿವಣ್ಣ. ರಾಜು. ಸ್ವಾಮಿ ಮತ್ತಿತರದಿದ್ದರು.