ಮೈಸೂರು: ಮೊಬೈಲ್ ಬಳಕೆ ಅತಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳ ಓದು, ಕ್ರೀಯಾತ್ಮಕತೆಗಳು ವಿನಾಶ ಹೊಂದುತ್ತಿವೆ. ಮೊಬೈಲ್‌ಎಂಬ ಮಾಯಾವಿ ಮನುಷ್ಯ ರಾಕ್ಷಸನಾಗುವುದಕ್ಕೆ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ. ಮೊಬೈಲ್ ನಲ್ಲಿ ಹೂತುಹೋದ ಯುವ ಮನಸ್ಸುಗಳನ್ನು ಸಾಹಿತ್ಯದ ಓದಿನಂಥ ಕ್ರೀಯಾತ್ಮಕ ಕೆಲಸಗಳತ್ತ ಮುಖಮಾಡಿಸಬೇಕಾಗಿದೆ ಎಂದು ಡಾ.ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.
ಮೈಸೂರಿನ ವಿಜಯನಗರದ ಖಾಸಗೀ ಹೋಟೆಲಿನಲ್ಲಿ ಭಾರತೀಯ ಜೈನ್ ಮಿಲನ್ ವಲಯ ೮, ಮೈತ್ರಿ ಜೈನ್ ಮಿಲನ್ ಮೈಸೂರು ಶಾಖೆಯು ಆಯೋಜಿಸಿದ ಮಾಸಿಕ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕನ್ನಡಕ್ಕೆ ಆದಿಕವಿ ಪಂಪನಿಂದ ಹಿಡಿದು ಹಲವಾರು ಜೈನಕವಿಗಳು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ರನ್ನನ ಆದಿಪುರಾಣ, ಅಜಿತತೀರ್ಥಂಕರ ಪುರಾಣ, ರಾಮಚಂದ್ರಚರಿತಪುರಾಣ, ಭರತೇಶ ವೈಭವ ಮೊದಲಾದವು ಕನ್ನಡದ ಶ್ರೇಷ್ಠ ಕಾವ್ಯಗಳಾಗಿವೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಯುವಸಮುದಾಯಕ್ಕೆ ಪಂಪ ಯಾರು? ಜನ್ನನ ಕೃತಿ ಯಾವುದು ಎಂಬ ಪರಿವೆಯೂ ಇಲ್ಲ.ಆದಿಪುರಾಣ, ಯಶೋಧರ ಚರಿತೆಯಂಥ ಕೃತಿಗಳು ಜೈನಧರ್ಮದ ಭವಾವಳಿಗಳ ಕತೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ. ಈ ಕಾವ್ಯಗಳ ಮೂಲಕ ಜೈನಧರ್ಮವು ಕನ್ನಡ ಸಂಸ್ಕೃತಿಯೊಂದಿಗೆ ಮಿಳಿತಗೊಂಡ ಬಗೆಯೇ ಬಹು ವಿಶಿಷ್ಟ. ಹೀಗಾಗಿ ಧರ್ಮವನ್ನು ಮೀರಿ ಕನ್ನಡದ ಮಕ್ಕಳಾದ ನಾವೆಲ್ಲ ಪಂಪ ರನ್ನರನ್ನು ಮುಂದಿನ ತಲೆಮಾರಿನವರೆಗೆ ಕೊಂಡೊಯ್ಯಬೇಕಾದ ಬಹುದೊಡ್ಡ ಜವಾಬ್ಧಾರಿಯನ್ನು ನಿರ್ವಹಿಸಬೇಕಾಗಿದೆ. ಯುವಜನತೆಯನ್ನು ಈ ಬಗೆಯಲ್ಲಿ ಪ್ರೋತ್ಸಾಹಿಸಬೇಕಾಗಿದೆ ಎಂದವರು ಹೇಳಿದರು. ತಾಂತ್ರಿಕವಾಗಿ ಬಹಳ ಮುಂದುವರಿದ ಈ ತಲೆಮಾರಿನ ಮಕ್ಕಳು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಕಡೆ ಆಕರ್ಷಿತರಾಗದೇ ಅಪಾಯಕಾರಿ ಆಸಕ್ತಿಗಳಿಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಬಹುದೊಡ್ಡ ಅಪಾಯಕಾರಿ ವಸ್ತುವೆಂದರೆ ಅದು ಮೊಬೈಲ್‌ಫೋನ್ ಗಳು ಎಂದರು.
ಮೊಬೈಲ್ ಬಳಕೆಗೆ ಬಂದಲ್ಲಿಂದ ಹೃದಯಾಘಾತಗಳು ಹೆಚ್ಚಾಗಿವೆ, ಕ್ಯಾನ್ರ‍್ನಂಥ ಖಾಯಿಲೆಗಳು ಹೆಚ್ಚಾಗಿವೆ. ಮಕ್ಕಳ ಮನಸ್ಸು ಸಂಕುಚಿತಗೊಳ್ಳುತ್ತಿದೆ. ಮಕ್ಕಳು ಕ್ರೌರ್ಯದತ್ತ ಮುಖಮಾಡುತ್ತಿದ್ದಾರೆ. ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಿವೆ. ಅಕ್ರಮ ಸಂಬಂಧಗಳು ಹೆಚ್ಚುತ್ತಿವೆ. ಪರಿಣಾಮವಾಗಿ ಇಡೀ ಸಮಾಜ ತನ್ನ ಸಾಮಾಜಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಎಂದು ಆತಂಕ ವ್ಯಕ್ತಪಡಿಸಿದರು. ಶಾಲಾಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕಾಗಿದೆ. ಯುವಕರು ಪಬ್ಜಿಯಂಥ ಆಟಗಳನ್ನು ಆಡುವುದರಲ್ಲಿ ಕಳೆದುಹೋಗುತ್ತಿದ್ದಾರೆ ಎಂದರು.
ಎಸ್.ಎಸ್.ಎಲ್.ಸಿ. ಹಾಗೂ ಪಿಯು.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಸುಪ್ರಜ್ನಾ ಜೈನ್ ಹಾಗೂ ಕೌಶಿಕ್ ಜೈನ್ ಅವರನ್ನು ಅಭಿನಂದಿಸಲಾಯಿತು.
ಮೈತ್ರಿ ಜೈನ್ ಮಿಲನ್ ರಾಜ್ಯಾಧ್ಯಕ್ಷ ಯುವರಾಜ ಭಂಡಾರಿ, ಗೌರವಾಧ್ಯಕ್ಷೆ ಶೀಲಾ ಅನಂತರಾಜು, ಕಾರ್ಯದರ್ಶಿ ರತ್ನರಾಜು, ಮೈಸೂರು ವಿಭಾಗದ ಅಧ್ಯಕ್ಷರಾದ ಮಹಾವೀರ್ ಸುದರ್ಶನ್, ಕಾರ್ಯದರ್ಶಿ ಮಹಾವೀರ್ ಸುರಾಲ್ ಮೊದಲಾದವರು ಉಪಸ್ಥಿತರಿದ್ದರು.