ಬೆಂಗಳೂರು: ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿರುವ ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಈ ಬಗ್ಗೆ ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ರೇವ್ ಪಾರ್ಟಿಯಲ್ಲಿ ತೆಲುಗಿನ ಪೋಷಕ ನಟಿ ಭಾಗಿಯಾಗಿದ್ದರು. ಆದರೆ, ಯಾವುದೇ ಜನಪ್ರತಿಧಿಗಳು ಭಾಗಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಪಾರ್ಟಿ ನಡೆಯುತ್ತಿರು ವುದರ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದ್ದಾರೆ. ಈ ವೇಳೆ, ಮಾದಕ ವಸ್ತು ಪತ್ತೆಗೆ ತರಬೇತಿ ಪಡೆದಿರುವ ಶ್ವಾನದಳದ ನೆರವು ಪಡೆಯಲಾಗಿದೆ. ನೂರಕ್ಕೂ ಅಧಿಕ ಜನ ಈ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ದಾಳಿ ವೇಳೆ ಮಾದಕ ವಸ್ತುಗಳು ಪತ್ತೆಯಾಗಿವೆ. ಕೆಲವರು ಬಳಸುತ್ತಿದ್ದ ಮಾದಕ ಪದಾರ್ಥಗಳನ್ನು ಸ್ವಿಮ್ಮಿಂಗ್ ಪೂಲ್ ಮತ್ತಿತರ ಕಡೆ ಎಸೆದಿದ್ದಾರೆ ಎಂದಿದ್ದಾರೆ.
ಈ ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ. ಘಟನಾ ಸ್ಥಳ ಬೆಂಗಳೂರು ಗ್ರಾಮಾಂತರದ ಹೆಬ್ಬಗೋಡಿ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಅದರ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ದಾಳಿ ಸಂದರ್ಭದಲ್ಲಿ ಪೋಷಕ ನಟಿಯೊಬ್ಬರು ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಆ ಬಗ್ಗೆ ಸಹ ತನಿಖೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಡ್ರಗ್ಸ್ ಪೂರೈಕೆ ಮಾಡಿದ್ದ ಪೆಡ್ಲರ್ ಸೇರಿ ಐವರನ್ನು ಬಂಧಿಸಲಾಗಿದೆ. ಫಾರ್ಮ್ ಹೌಸ್‌ನಲ್ಲಿ ಎಂಡಿಎಂಎ, ಕೊಕೇನ್, ಹೈಡ್ರೊ ಗಾಂಜಾ ಪತ್ತೆಯಾಗಿದೆ.