ಮಂಡ್ಯ: ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಧಿಡೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ತಹಶೀಲ್ದಾರ್ ಹಾಗೂ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದರು.
ಕಛೇರಿಯಲ್ಲಿ ಹಾಜರಿದ್ದ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿ, ಸಾರ್ವಜನಿಕರ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ತಹಶೀಲ್ದಾರ್ ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕೆರಗೋಡು ಗ್ರಾಮದ ಮಹಿಳೆ ಸುಧಾ, ರಸ್ತೆ ಒತ್ತುವರಿ ತೆರವು ಹಾಗೂ ಮಳೆಯಿಂದ ಹಾನಿಗೊಳಗಾಗಿರುವ ಮನೆ ನಿರ್ಮಾಣಕ್ಕೆ ಮನವಿ ಮಾಡಿದರು.
ಈ ಸಂಬಂಧ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಲು ತಹಶೀಲ್ದಾರ್ ಗೆ ಸೂಚಿಸಿದರು.
ಸಾರ್ವಜನಿಕರ ಪಡಿತರ ಚೀಟಿ ಸಮಸ್ಯೆ, ಆರ್.ಟಿ.ಸಿ ತಿದ್ದುಪಡಿ ಹಾಗೂ ಕಂದಾಯ ಇಲಾಖೆಯ ಸಮಸ್ಯೆಗಳ ನಿವಾರಣೆ ಮನವಿ ಮಾಡಿದ, ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ಸರ್ಕಾರದ ಆದೇಶದಂತೆ ಖಾತೆದಾರ ರೈತರ ಆಧಾರ್ ಸೀಡಿಂಗ್ ಯೋಜನೆಯ ಕಾರ್ಯ ನಡೆಯುತ್ತಿದೆ. ಭೂ ಹಿಡುವಳಿ ಹೊಂದಿರುವ ಖಾತೆದಾರರ ರೈತರ ಆರ್.ಟಿ.ಸಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಆಧಾರ್ ಸೀಡಿಂಗ್ ಯೋಜನೆಯ ಪ್ರಗತಿ ಚುರುಕುಗೊಳಿಸಲು ಸೂಚನೆ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ 21 ಲಕ್ಷ ಖಾತೆದಾರ ರೈತರಿದ್ದಾರೆ. ಈ ಪೈಕಿ 1.10 ಮಂದಿಯ ಆಧಾರ್ ಸೀಡಿಂಗ್ ಮುಕ್ತಾಯವಾಗಿದೆ. ಉಳಿದ ರೈತರ ಆಧಾರ್ ಕಾರ್ಡ್ ಲಿಂಕ್ ಯೋಜನೆ ಪೂರ್ಣಗೊಳಿಸಲು ತಾಕೀತು ಮಾಡಲಾಗಿದೆ. ಕಂದಾಯ ಗ್ರಾಮಗಳಲ್ಲಿ 4ಸಾವುರ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಲಾಗುತ್ತಿದೆ. ಮಂಡ್ಯ ತಾಲ್ಲೂಕು ಆಡಳಿತದಿಂದ 419 ಮಂದಿಗೆ ಹಕ್ಕುಪತ್ರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಎಸಿ ಮಹೇಶ್, ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ಎಡಿಎಲ್’ಆರ್ ಮಮತಾ, ಭೂಮಿ ಶಾಖೆ ಸಲಹೆಗಾರ ಲೋಹಿತ್, ಗ್ರಾಮ ಲೆಕ್ಕಾಧಿಕಾರಿ ತೇಜಸ್ ಗೌಡ ಭಾಗಿಯಾಗಿದ್ದರು.