ಚನ್ನಪಟ್ಟಣ: ವಿದ್ಯಾರ್ಥಿ ದಿಸೆಯಲ್ಲೇ ಸನ್ಮಾನಗಳಿಗೆ ಭಾಜನರಾದವರಿಗೆ ಮುಂದೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಜ್ಜಾಗಿ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಸ್ತೂತಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಎಲ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ೧೨೫ ಕ್ಕೆ ೧೨೪ ಅಂಕೆ ಪಡೆದ ಸುಳ್ಳೇರಿಯ ಶ್ರೀ ಮಹದೇಶ್ವರ ವಿದ್ಯಾಸಂಸ್ಥೆ ಪ್ರೌಢಶಾಲಾ ಮಕ್ಕಳಿಗೆ ಹಾಗೂ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಹಿಂದಿನ ವರ್ಷಗಳಿಗಿಂತ ಈ ವರ್ಷ ಹೆಚ್ಚು ಭದ್ರತೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿನ ಫಲಿತಾಂಶವೂ ಸಹ ಕಡಿಮೆ ಬಂದಿದೆ, ಆದರೆ ಇದರೆ ನಡುವೆ ಗ್ರಾಮೀಣ ಭಾಗದ ಅನುದಾನಿತ ಶಾಲೆಯಾದ ಶ್ರೀ ಮಹದೇಶ್ವರ ಪ್ರೌಢಶಾಲೆಯ ಪಿ.ಪ್ರಕೃತಿ, ಬಿಂಧು, ಎಸ್.ಆರ್. ಕೀರ್ತನ, ಜಿ.ಪಿ.ಹೇಮ, ಎಂ.ಎನ್. ದರ್ಶನ್ ಅವರು ಕನ್ನಡ ವಿಭಾಗದಲ್ಲಿ ೧೨೫ ಕ್ಕೆ ೧೨೪ ಅಂಕವನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಜೊತೆಗೆ ಹಲವರು ತಾಲೂಕಿಗೆ ಉತ್ತಮ ಫಲಿತಾಂಶ ಪಡೆದಿದ್ದಾರೆ. ಇದನ್ನು ಗುರುತಿಸಿ ಕಕಜ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರು ವಿದ್ಯಾರ್ಥಿಗಳಿಗೆ ಅಭಿನಂದಿಸುವ ಮೂಲಕ ಅವರ ಶ್ರಮಕ್ಕೆ ಪ್ರೋತ್ಸಾಹ ನೀಡಿದ್ದು ಈ ಸನ್ಮಾನಗಳು ನಿಮಗೆ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸುತ್ತಿವೆ. ಮುಂದೆ ಪಿಯುಸಿ, ಡಿಗ್ರಿ ಸೇರಿದಂತೆ ಸ್ನಾತಕೋತ್ತರ ಪದವಿ, ಐಎಎಸ್. ಕೆಎಎಸ್ ಪರೀಕ್ಷೆಗಳಲ್ಲಿ ನಿಮ್ಮ ಸಾಧನೆ ಇದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ನಿರೀಕ್ಷೆ ಮಾಡುವಂತೆ ಈ ಸನ್ಮಾನದ ಜವಾಬ್ದಾರಿ ನಿಮ್ಮನ್ನು ಸದಾ ಎಚ್ಚರಿಸಿ ನಿಮ್ಮ ಶ್ರದ್ದೆ ಮತ್ತು ಏಕಾಗ್ರತೆಗೆ ದಾರಿದೀಪವಾಗಲಿ ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದಿನ ಜೀವನಕ್ಕೆ ಪ್ರಮುಖ ಘಟ್ಟವಾಗಿದ್ದು ಇಲ್ಲಿಂದ ನಿಮ್ಮ ಪಯಣ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಹಾದಿಯಾಗಲಿದೆ. ಈ ನಿಟ್ಟಿನಲ್ಲಿ ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಇಂದು ಪಟ್ಟಣದ ಕೇಂದ್ರ ಸ್ಥಾನದಲ್ಲಿ ಮಾಡಿರುವ ಈ ಸನ್ಮಾನವು ಮುಂದೆ ತಾಲೂಕಿಗೆ ಕೀರ್ತಿ ತರುವ ಹಂತದಲ್ಲಿ ನಿಮ್ಮ ಸಾಧನೆಗೆ ದಾರಿ ದೀಪವಾಗಲಿ ಎಂದು ಕಿವಿಮಾತು ಹೇಳಿದರು.
ಕಕಜವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಎಲ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ೧೨೫ ಕ್ಕೆ ೧೨೪ ಅಂಕ ಪಡೆದಿರುವ ಮಕ್ಕಳ ಸಾಧನೆ ಶ್ಲಾಘನೀಯವಾಗಿದೆ. ಆಂಗ್ಲ ಭಾಷೆಯ ವ್ಯಾಮೋಹದಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ವಿದ್ಯಾರ್ಥಿಗಳ ನಡುವೆ ಮಾತೃಭಾಷೆಗೆ ಮೊದಲ ಆಧ್ಯತೆ ನೀಡಿರುವ ವಿದ್ಯಾರ್ಥಿಗಳು ನಮ್ಮ ತಾಲೂಕಿನ ಹೆಮ್ಮೆಯಾಗಿದ್ದಾರೆ. ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಎಲ್ಲಾ ಮಕ್ಕಳಿಗೆ ಇದು ಮೊದಲ ಹಂತದ ಅಗ್ನಿಪರೀಕ್ಷೆಯಾಗಿದ್ದು ಮುಂದೆ ಸಾಕಷ್ಟು ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಿದ್ದು, ನಿಮ್ಮ ಪಯಣ ದೂರದ ಬೆಟ್ಟವನ್ನು ಮುಟ್ಟುವುದಾಗಿದ್ದು ಈ ಪಯಣದಲ್ಲಿ ಮುಂದೆ ಹೋದಂತೆಲ್ಲಾ ಕಲ್ಲುಮುಳ್ಳುಗಳಂತೆ ಸವಾಲುಗಳನ್ನು ಎದುರಿಸಬೇಕಿದೆ. ಈ ನಿಟ್ಟಿನಲ್ಲಿ ನಿಮಗೆ ಸಾಧನೆಯ ಗುರಿ ಇದ್ದರೆ ಗುರಿಯ ಛಲ ನಿಮ್ಮನ್ನು ದೂರದ ಬೆಟ್ಟದ ಮೇಲಿನ ಶಿಲೆಯನ್ನಾಗಿ ಗುರುತಿಸಿಕೊಳ್ಳುಲು ದಾರಿದೀಪವಾಗಲಿದೆ.
ಇಂದು ತಾಲೂಕಿನಲ್ಲಿ ಕೆಎಎಸ್, ಐಎಎಸ್, ಯುಪಿಎಸ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದವರು, ವಿವಿಧ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ನಿಮಗೆ ಸೂರ್ತಿಯಾಗಲಿ. ನಿಮ್ಮ ಸಾಧನೆಯ ಜೊತೆಗೆ ನಿಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ಕನ್ನಡ ನಾಡು, ನುಡಿ, ಜಲದ ಅಸ್ಮಿತೆ ಉಳಿವಿಗೆ ಹೋರಾಟದ ಮನೋಭಾವ ಬೆಳಸಿಕೊಳ್ಳುವ ಮೂಲಕ ನಿಮ್ಮ ತಂದೆ, ತಾಯಿ ಹಾಗೂ ತಾಲೂಕಿಗೆ ಕೀರ್ತಿ ಹೆಚ್ಚಿಸಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಲು ಶಾಲೆಯ ವಿದ್ಯಾರ್ಥಿನಿ ರಿಷಿಕಾ ಪ್ರಭುತೇಜ ಮಾತನಾಡಿ, ನಮ್ಮ ಸಾಧನೆಯನ್ನು ಗುರುತಿಸಿ ನಮಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸನ್ಮಾನ ಮಾಡುತ್ತಿರುವುದು ನಮಗೆ ಹೆಚ್ಚಿನ ಜವಾಬ್ದಾರಿ ವಹಿಸಿದೆ. ನನ್ನ ಸಾಧನೆಗೆ ನನ್ನ ತಂದೆ ನಟರಾಜು, ತಾಯಿ ಮಮತಾ ಅವರ ಪ್ರೋತ್ಸಾಹ ಹಾಗೂ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಕಾರಣವಾಗಿದ್ದು, ಪ್ರೀತ್ಸಾಹ ಸಿಕ್ಕರೆ ಎಲ್ಲಾ ವಿದ್ಯಾರ್ಥಿಗಳು ಸಾಧನೆ ಮಾಡಲು ಅವಕಾಶ ಇದೆ ಎಂದು ಅಭಿಪ್ರಾಯಿಸಿದರು.
ಸನ್ಮಾನ ಸ್ವೀಕರಿಸಿದ ಮತ್ತೋರ್ವ ವಿದ್ಯಾರ್ಥಿನಿ ಅಂಬೇಡ್ಕರ್ ವಸತಿ ಶಾಲೆಯ ಯಶಸ್ವಿನಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಮ್ಮ ಭವಿಷ್ಯಕ್ಕೆ ಮೊದಲ ಮೆಟ್ಟಿಲಾಗಿದ್ದು ನಮಗೆ ಹೆಚ್ಚು ಪ್ರೋತ್ಸಾಹ ನೀಡಿ ಮಾರ್ಗದರ್ಶಕರು ನಮ್ಮ ಬೆನ್ನ ಹಿಂದೆ ಇದ್ದರೆ ಪ್ರತಿಯೊಬ್ಬರೂ ಸಾಧನೆ ಮಾಡಬಹುದು, ನನ್ನ ಶಿಕ್ಷಕರು ಮತ್ತು ಪೋಷಕರು ನನ್ನ ಸಾಧನೆಗೆ ಎಲ್ಲಾ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ನೀಡಿದ್ದಾರೆ. ನಮ್ಮ ಸಾಧನೆಯನ್ನು ಗುರುತಿಸಿ ನಮ್ಮನ್ನು ಪ್ರೋತ್ಸಾಹಿಸಿರುವ ಕಕಜವೇ ಸಂಘಟನೆಯ ಆಶಯದಂತೆ ಮುಂದೆ ಮತ್ತಷ್ಟು ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಂದರ್ಭದಲ್ಲಿ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಗೌತಮಿ ಎಸ್ ಸತೀಶ್ ಹಾಗೂ ದ್ವಿತೀಯ ಸ್ಥಾನ ಪಡೆದ ಪ್ರಕಾಶ್ ಮತ್ತು ರೂಪ ಅವರ ಪುತ್ರ ಹರ್ಷಪ್ರಕಾಶ್, ದ್ವಿತೀಯ ಸ್ಥಾನ ಪಡೆದ ಶಿಕ್ಷಕ ಸಂಕಲಗೆರೆ ತಿಮ್ಮೇಗೌಡರ ಪುತ್ರಿ ಕಾವ್ಯಶ್ರೀ, ತೃತೀಯ ಸ್ಥಾನ ಪಡೆದ ಯಶಸ್ವಿನಿ, ನಾಲ್ಕನೇ ಸ್ಥಾನ ಪಡೆದ ಶಿವರಾಜು ಅವರ ಪುತ್ರಿ ಮೋನಿಷ, ಐದನೇ ಸ್ಥಾನ ಪಡೆದ ಶಶಿಕಲಾ ಅವರ ಪುತ್ರಿ ಮೌರ್ಯಶ್ರೀ, ಐದನೇ ಸ್ಥಾನ ಪಡೆದ ರಿಷಿಕಾ ಪ್ರಭುತೇಜ, ಉಮಾ ಮತ್ತು ಸುಜಯ್ ಅವರ ಪುತ್ರಿ ದನುಜಾ ಅವರನ್ನು ಕಕಜ ವೇದಿಕೆಯಿಂದ ಸನ್ಮಾನಿಸಲಾತು.
ಸಂದರ್ಭದಲ್ಲಿ ಸುಳ್ಳೇರಿ ಶ್ರೀ ಮಹದೇಶ್ವರ ಪ್ರೌಢಶಾಲೆಯ ಪ್ರಾಂಶುಪಾಲ ರಮೇಶ್, ಕನ್ನಡ ಶಿಕ್ಷಕ ಎನ್‌ಎಸ್ ಸಿದ್ದರಾಜು, ಸಂಸ್ಥಾಪಕರಾದ ಎಂ.ಎಲ್. ಶಿವಸ್ವಾಮಿ, ಕಕಜವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ಆರ್. ಶಂಕರ್, ಚಿಕ್ಕಣಪ್ಪ, ಮೋನಿಷಾರ ತಂದೆ ಶಿವರಾಜು, ದನುಜಾರ ಪೋಷಕರಾದ ಉಮಾ ಮತ್ತು ಸುಜಯ್, ರಿಷಿಕಾರ ಪ್ರಭುತೇಜರ ತಂದೆ ನಟರಾಜ್ ಮೌರ್ಯಶ್ರೀ ತಾಯಿ ಶಶಿಕಲಾ ಇದ್ದರು.