ಮುಂಬೈ: ಭಾರತದ ಮುಂದಿನ ಮುಖ್ಯ ಕೋಚ್ ಆಗಲು ತಮ್ಮನ್ನು ಸಂಪರ್ಕಿಸಲಾಗಿದೆ, ಆದರೆ ಅದನ್ನು ತಿರಸ್ಕರಿಸಿದ್ದೇವೆ ಎಂಬ ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಹೇಳಿಕೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿರುಗೇಟು ನೀಡಿದ್ದಾರೆ.
ಮಾಜಿ ಆಸ್ಟ್ರೇಲಿಯನ್ ಕ್ರಿಕೆಟಿಗರನ್ನು ಮಂಡಳಿಯು ಸಂಪರ್ಕಿಸಿದೆ ಎಂಬ ಹೇಳಿಕೆಯನ್ನು ಜಯ್ ಶಾ ಶುಕ್ರವಾರ ತಳ್ಳಿಹಾಕಿದ್ದಾರೆ. ಅಲ್ಲದೆ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿ ಭಾರತೀಯರೇ ಆಗಿರಬಹುದು ಎಂದು ಸುಳಿವು ನೀಡಿದರು.
ಕೋಚ್ ಆದವರು ದೇಶದ ಆಟದ ರಚನೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಶಾ ಹೇಳಿದರು.
ಸದ್ಯ ಭಾರತ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಅವಧಿ ಟಿ20 ವಿಶ್ವಕಪ್ ಗೆ ಅಂತ್ಯವಾಗುತ್ತದೆ. ದ್ರಾವಿಡ್ ಅವರು ಮೂರನೇ ಅವಧಿಗೆ ಆಸಕ್ತಿ ಹೊಂದಿಲ್ಲ ಎಂದು ಮಂಡಳಿಗೆ ತಿಳಿಸಿದ್ದಾರೆ. ಇದೇ ವೇಳೇ ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಅವರು ಕೋಚ್ ಸ್ಥಾನಕ್ಕೆ ಬಿಸಿಸಿಐ ಆಫರ್ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
“ನಾನು ಅಥವಾ ಬಿಸಿಸಿಐ ಯಾವುದೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರನ್ನು ಕೋಚಿಂಗ್ ಆಫರ್ ನೊಂದಿಗೆ ಸಂಪರ್ಕಿಸಿಲ್ಲ. ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುವ ವರದಿಗಳು ಸಂಪೂರ್ಣವಾಗಿ ತಪ್ಪು” ಎಂದು ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.