ಮೈಸೂರು: ಜ್ಞಾನದಿಂದ ವಂಚಿತವಾದ ಒಂದು ಸಮುದಾಯದಿಂದ ಬಂದು, ಜ್ಞಾನವನ್ನ ಪಡೆಯವುದೇ ತನ್ನ ಜೀವನದ ಧ್ಯೇಯವನ್ನಾಗಿಸಿಕೊಂಡು ಜ್ಞಾನವನ್ನು ಸಂಪಾದನೆ ಮಾಡಿದಂತಹ ವ್ಯಕ್ತಿಯ ಹುಟ್ಟಿದ ದಿನವನ್ನ ಜ್ಞಾನದ ದಿನವೆಂದು ಘೋಷಣೆ ಮಾಡಿರುವುದು ಜಗತ್ತಿನ ವಿಸ್ಮಯಗಳಲ್ಲಿ ಒಂದು ಎಂದು ಬಿ.ಎನ್. ಬಹದ್ದೂರ್ ಇನ್ಸಿಟ್ಯೂಟ್ ಆಫ್ ಮಾನೇಜ್ಮೆಂಟ್ ಸೈನ್ಸ್ ನ ಪ್ರೊ. ಡಿ. ಆನಂದ್ ಶ್ಲಾಘಿಸಿದರು.
ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೩ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಜ್ಞಾನೋತ್ಸವ ೨೦೨೪ರ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್‌ರವರು ಜಗತ್ತಿನ ಜ್ಞಾನದ ಸಂಕೇತ, ಈ ಮಾತನ್ನು ಅಧಿಕೃತಗೊಳಿಸಲು ವಿಶ್ವಸಂಸ್ಥೆ ೨೦೧೮ರಲ್ಲಿ ಬಾಬಾ ಸಾಬೇಬರ ೧೨೫ನೇ ಜನ್ಮದಿನದಾಚರಣೆ ಸಂದರ್ಭದಲ್ಲಿ ಏ:೧೪ನ್ನು ಜಗತ್ತಿನ ಜ್ಞಾನದ ದಿನವೆಂದು ಘೋಷಣೆ ಮಾಡಿತು. ಆದರೆ ಬಹಳಷ್ಟು ಮಂದಿಗೆ ಆ ದಿನವನ್ನು ಏಕೆ ಜ್ಞಾನದ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿದೇ ಇಲ್ಲ. ಅಂದು ವಿಶ್ವಸಂಸ್ಥೆ ಜಗತ್ತಿಗೆ ಸುಸ್ಥಿರ ಅಭಿವೃದ್ಧಿ ಯೋಜನೆ ಎಂಬ ಯೋಜನೆನ್ನು ರೂಪಸಿ ಘೋಷಣೆ ಮಾಡಿತು. ಇದರ ಉದ್ದೇಶ ಜಗತ್ತಿನ ಎಲ್ಲಾ ರಾಷ್ಟ್ರಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಸದಸ್ಯ ರಾಷ್ಟ್ರಗಳು ಆನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಒಂದು ನಿರ್ಧಿಷ್ಟ ಅವಧಿಗೆ ಯೋಜನೆಯ ರೂಪುರೇಷೆಗಳನ್ನು ತಯಾರಿಸಿ ಇತರೆ ಎಲ್ಲಾ ಸದಸ್ಯ ರಾಷ್ಟçಗಳಿಗೆ ಕಳುಹಿಸುತ್ತಾರೆ. ಅದರಂತೆ ೨೦೦೦ – ೨೦೧೫ವರೆಗೆ ಮಿಲೇನಿಯಂ ಪ್ಲಾನ್ಸ್ ಎಂದು ಮಾಡಿಕೊಂಡಿದ್ದರು ಅದು ೧೫ ವರ್ಷಕ್ಕೆ ಮುಕ್ತಾಯವಾಗಿ ೨೦೧೬-೨೦೩೦ವರೆಗೆ ಸುಸ್ಥಿರ ಅಭಿವೃದ್ಧಿ ಯೋಜನೆಯ ಮೂಲಕ ಜಗತ್ತನ್ನು ಪರಿವರ್ತನೆ – ಬದಲಾವಣೆ ಮಾಡಬೇಕು, ಅಭಿವೃದ್ಧಿಪಡಿಸಬೇಕೆಂಬ ನಿಟ್ಟಿನಲ್ಲಿ ಇದನ್ನು ರಚಿಸಲು ಸಿದ್ದವಾದ ತಂಡ ಸುಮಾರು ೧೭ ಸುಸ್ಥಿತ ಅಭಿವೃದ್ಧಿಯ ಗುರಿಗಳು, ೧೬೭ ಪ್ರತಿನಿಧಿಕ ಅಂಶಗಳುನ್ನು ರೂಪಿಸಿ ಜಗತ್ತಿನ ಮುಂದೆ ಇಟ್ಟಾಗ ಮಾದ್ಯಮದವರ ಈ ಯೋಜನೆಯ ಉದ್ದೇಶವೇನು? ಈ ೧೫ ವರ್ಷದಲ್ಲಿ ಏನನ್ನು ಸಾಧಿಸಬೇಕೆಂದಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಅಂದಿನ ವಿಶ್ವಸಂಸ್ಥೆಯ ಆಡಳಿತಾಧಿಕಾರಿ, ಶಿಕ್ಷಣದ ಮೂಲಕ ಬಡತನ – ಹಸಿವು – ನಿರುದ್ಯೋಗ ಹಾಗೂ ಎಲ್ಲಾ ರೀತಿಯ ಅಸಮರ್ಥತೆಯನ್ನ ಇಲ್ಲವಾಗಿಸುವುದು ನಮ್ಮ ಉದ್ದೇಶ. ಇಂತಹ ಯೋಜನೆಗಳನ್ನು ರೂಪಿಸಲು ನಮಗೆ ಪ್ರೇರಣೆ ಭಾರತದ ಡಾ. ಬಿ.ಆರ್. ಅಂಬೇಡ್ಕರ್‌ರವರು ಎಂದು ಉತ್ತರ ನೀಡಿದ್ದರು. ಕಾರಣ ಜಗತ್ತಿನ ಎಂತಹ ಸಮಸ್ಯೆಗಳಿಗೂ ಜ್ಞಾನದ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದೆಂದು ಸಾಧಿಸಿ ತೋರಿಸಿದವರೆಂದು ವಿಶ್ವಜ್ಞಾನ ದಿನದ ಹಿನ್ನಲೆಯನ್ನು ವಿಶ್ಲೇಷಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾವರ್ಧಕ ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕ ಕೆ.ಎಲ್. ಚಂದ್ರಶೇಖರ್ ಐಜೂರ್ ಮಾತನಾಡಿ, ನನ್ನ ಶೈಕ್ಷಣಿಕ ಅವಧಿಯಲ್ಲಿ ಕಾನೂನು ವಿಷಯನ್ನು ಹೊರತು ಪಡಿಸಿ ಹೊಸದಾಗಿ ಏನಾದರು ವಿಷಯನ್ನು ಕಲಿಯಲು ಹೊರಟಾಗ ೨೫-೫೦ ರೂ.ಗಳಿಗೆ ಅಂಬೇಡ್ಕರ್‌ರವರ ಪುಸ್ತಕಗಳು ಸಿಗುತ್ತಿದ್ದವು. ೧೦೦ ವರ್ಷದ ಹಿಂದೆ ನೋಡುವುದಾದರೆ ಭಾರತವನ್ನು ಕಟ್ಟಲು ೨ ಅವಮಾನಗಳು ಬಹುದೊಡ್ಡ ಕಾರಣವಾದವು. ೧೮೯೩ರ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ವಸಾಹತುಶಾಹಿಯ ರಾಜಾಳ್ವಿಕೆ ಇರುತ್ತದೆ. ಗಾಂಧಿಜೀ ಒಂದು ಕೇಸ್‌ನ ಸಂಬಂಧ ಆಲ್ಸ್ಬರ್ಗ್ ರೈಲ್ವೇ ನಿಲ್ದಾಣದದಿಂದ ಫಸ್ಟ್ಕ್ಲಾಸ್ ಟಿಕೇಟ್ ಪಡೆದು ಮೊದಲ ಕಂಪಾರ್ಟ್ಮೆಂಟ್‌ನಲ್ಲಿ ಕುಳಿತ್ತಿದ್ದ ಅವರನ್ನು ಭಾರತೀಯರೆನ್ನುವ ಕಾರಣಕ್ಕೆ ರೈಲಿನಿಂದ ಹೊರ ಹಾಕುತ್ತಾರೆ. ಇಂದಿಗೂ ಸಹ ಆ ನಿಲ್ದಾಣದಲ್ಲಿ ಕಲ್ಲಿನ ಸ್ತೂಪವನ್ನು ನೆಟ್ಟು ದಕ್ಷಿಣ ಆಫ್ರಿಕಾ ಭಾರತದ ಹಾಗೂ ಗಾಂಧಿಜೀಯ ಕ್ಷಮೆಯನ್ನು ಕೇಳುತ್ತಲೇ ಇದೆ. ಕಾರಣ ಗಾಂಧಿ ಭಾರತದಲ್ಲಿ ಎಷ್ಟು ಪ್ರಭಾವಿ ಮತ್ತು ಅವರ ಶಕ್ತಿ ಏನೆಂದು ತಿಳಿದಿರಲಿಲ್ಲ. ೧೯೦೧ರ ಸತಾರಲ್ಲಿ ೯ ವರ್ಷದ ಹುಡುಗನ ಜಾತಿ ತಿಳಿದ ತಕ್ಷಣ ಆತನನ್ನು ಎತ್ತಿನಗಾಡಿಯಿಂದ ಹೊರ ದಬ್ಬುತ್ತಾರೆ. ಆ ಹುಡುಗ ಬೇರಾರು ಅಲ್ಲ ಬಾಬಾ ಸಾಹೇಬ್ ಡಾ. ಭೀಮ್‌ರಾವ್ ಅಂಬೇಡ್ಕರ್. ನನ್ನ ಇಷ್ಟು ವರ್ಷದ ಜೀವನದಲ್ಲಿ ಅಂಬೇಡ್ಕರ್‌ಗೆ ಕ್ಷಮೆಯಾಗಲಿ ಅಥವಾ ಅವರ ಸಮುದಾಯಕ್ಕೆ ಕ್ಷಮೆಯಾಚಿಸಿರುವುದ ಇಡೀ ಭಾರತದಲ್ಲೇ ನಾ ಎಂದು ಕಂಡು ಕೇಳಿಲ್ಲ. ದಕ್ಷಿಣ ಆಫ್ರಿಕಾ ತನ್ನ ತಪ್ಪಿನ ಅರಿವಾಗಿ ಇಂದಿಗೂ ಕ್ಷಮೆಯಾಚಿಸುತ್ತಲೇ ಇದೆ. ಆದರೆ ಅಂಬೇಡ್ಕರ್‌ಗೆ ಕ್ಷಮೆಯಾಚಿಸಿಯೇ ಇಲ್ಲ. ಈ ಎರಡು ಅವಮಾನಗಳು ಭಾರತದ ಬೆಳೆವಣಿಗೆಗೆ ಅತ್ಯಂತ ಪ್ರಮುಖವಾದದ್ದು. ಎತ್ತಿನ ಬಂಡಿಯಿಂದ ನೂಕಲ್ಪಡುವ ಹುಡುಗ ಇದೇ ಜಾತಿಪೀಡಿತ ದೇಶಕ್ಕೆ ಸಂವಿಧಾನದಂತಹ ಚಿಕಿತ್ಸೆಯನ್ನು ನೀಡುತ್ತಾರೆ. ಅಂಬೇಡ್ಕರ್ ಜೀವನದಲ್ಲಿ ಅತ್ಯಂತ ಪ್ರಮುಖವಾದ ೪ ಪತ್ರವನ್ನು ಪ್ರತಿಯೊಬ್ಬರು ಓದಿ ಅಥೈಸಿಕೊಳ್ಳಲೇಬೇಕು ಮತ್ತು ವ್ಯಕ್ತಿಯ ವ್ಯಕ್ತಿತ್ವವನ್ನು ಕಟ್ಟುಕೊಡಲು ಈ ಪತ್ರಗಳೇ ಸಾಕು. ೦೪-೦೯-೧೯೨೧ರಂದು ವಿದ್ಯಭ್ಯಾಸಕ್ಕೆ ಹಣದ ಕೊರತೆ ಉಂಟಾಗಿ ಸಾಲದ ರೂಪವಾಗಿ ಹಣ ನೀಡುವಂತೆ ಛತ್ರಪತಿ ಶಾಹುಮಹರಾಜರಿಗೆ, ೧೯-೦೮-೧೯೨೬ ಅಪೌಷ್ಠಿಕತೆಯಿಂದ ತಮ್ಮ ೪ ಮಕ್ಕಳನ್ನು ಕಳೆದುಕೊಂಡದ್ದು ಮತ್ತು ಕೊನೆಯ ಮಗನ ಅಂತಿಮ ಸಂಸ್ಕಾರ ಮುಗಿಸಿಬಂದು ಆತನ ಅಗಲಿಕೆಯ ನೋವನ್ನು ಕುರಿತು ಸ್ನೇಹಿತ ದತ್ತೋಬಗೆ, ೧೯-೦೩-೧೯೩೮ರ ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಓದುಗರ ಪತ್ರದ ವಿಭಾಗದಲ್ಲಿ ೧೪ ವರ್ಷದ ಬಾಲಕಿಯ ಮೇಲೆ ಅತ್ಯಾಚಾರವಾದಾಗ ಅಲ್ಲಿ ಉಂಟಾದ ತಾರತಮ್ಯದ ಕುರಿತು, ೦೧-೦೧-೪೮ರಂದು ತಮ್ಮ ಕುರಿತು ಪತ್ರದ ಮುಖೇನ ಘರ್ಜಿಸಿದ ನುಡಿಗಳು.
ಮುಂದುವರಿದು ಮಾತನಾಡಿ, ಸಂವಿಧಾನದ ರಚನೆಗೆ ಅಂಬೇಡ್ಕರ್ ಮೊದಲ ಆಯ್ಕೆಯಲ್ಲ. ಮಲೇಷಿಯಾ, ಸಿಂಗಾಪೂರ್, ಇಂಗ್ಲೆಂಡ್ ಗೆ ಸಂವಿಧಾನ ರಚಿಸಿದ ಐವೊರ್ ಜೆನ್ನಿಂಗ್ಸ್ ಶ್ರೀಲಂಕಾಗೆ ಸಂವಿಧಾನ ಬಂದಿರುವ ವಿಷಯ ತಿಳಿದ ಸರ್ದಾರ್ ವಲ್ಲಬಾಯ್ ನೇತೃತ್ವದಲ್ಲಿ ಜೆನ್ನಿಂಗ್ಸ್ರನ್ನು ಭೇಟಿ ಮಾಡಿ ಸಂವಿಧಾನ ರಚಿಸಿಕೊಡುವಂತೆ ಕೇಳಿಕೊಂಡಾಗ, ಅಂಬೇಡ್ಕರ್‌ರಂತಹ ಜ್ಞಾನಿ ನಿಮ್ಮ ದೇಶದಲ್ಲೇ ಇರುವುದು ಅವರಿಗಿಂತ ಚೆನ್ನಾಗಿ ನನ್ನಿಂದ ರೂಪಿಸಲಾಗದು ಎಂದಾಗ ವಲ್ಲಬಾಯ್ ಪಟೇಲರು ನೆಹರೂ ಗಮನಕ್ಕೆ ತರಲು ಅವರು ಗಾಂಧಿಯೊಡನೆ ಚರ್ಚಿಸಿದ ಬಳಿಕ ಜೆನ್ನಿಂಗ್ಸ್ ಹೊರತು ಪಡಿಸಿ ಬೇರೆ ಯಾವ ಆಯ್ಕೆ ಇಲ್ಲದ ಕಾರಣ ಅಂಬೇಡ್ಕರ್‌ರವರನ್ನು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದು ಶತ್ರುಗಳ ಪಾಳಯದಲ್ಲಿ ಜಾತ್ಯಾತೀತ ತತ್ವಗಳನ್ನೇ ಮುನ್ನೆಲೆಗಿಟ್ಟುಕೊಂಡು ಬರೆದಂತಹ ಸಂವಿಧಾನ ನಮ್ಮ ಭಾರತ ಸಂವಿಧಾನ. ನಮ್ಮ ಈ ಸಂವಿಧಾನವನ್ನೇ ಮಾದರಿಯನ್ನಾಗಿಟ್ಟುಕೊಂಡು ರಚಿಸಲ್ಪಟ್ಟ ಸಂವಿಧಾನವೇ ದಕ್ಷಿಣ ಆಫ್ರಿಕಾ ಸಂವಿಧಾನ. ಹೀಗೆ ಅಂಬೇಡ್ಕರ್‌ರವರ ವಿದ್ಯಾರ್ಥಿ – ವೃತ್ತಿ – ವೈವಾಹಿಕ ಜೀವನದಲ್ಲಿ, ಕೊನೆಯದಾಗಿ ತಮ್ಮ ಅಂತಿಮ ದಿನಗಳಲ್ಲಿಯೂ ಸಹ ಅಧ್ಯಯನಶೀಲರಾಗಿದ್ದವರು. ತಮ್ಮ ಸಾವು ಸಮೀಪಿಸುವುದು ಘೋಚರವಾದಾಗ ಅಕ್ಟೋಬರ್ ೧೪, ೧೯೫೬ರಂದು ಬೌದ್ಧ ದಮ್ಮಕ್ಕೆ ಮತಾಂತವಾಗಿ ಇಂದು ನನಗೆ ನರಕದಿಂದ ಮುಕ್ತಿ ದೊರೆತಿದ್ದು, ನಾನು ಬಹಳ ಸಂತೋಷದಿಂದಿದ್ದೇನೆ ಎಂದು ಹೇಳಿದ್ದರು. ಬಹುಶಃ ಭಾರತದಲ್ಲಿ ಒಂದು ಧರ್ಮವನ್ನ – ಧಾರ್ಮಿಕತೆಯನ್ನ ನರಕ ಎಂದು ಕರೆದ ಏಕೈಕ ವ್ಯಕ್ತಿ ಎಂದರೆ ಅದು ಬಾಬಾ ಸಾಹೇಬ್ ಡಾ. ಭೀಮ್‌ರಾವ್ ಅಂಬೇಡ್ಕರ್‌ರವರು ಮಾತ್ರ. ಮಿಕ್ಕವರು ಆ ನರಕಕ್ಕೆ ಹೊಂದುಕೊಂಡಿದ್ದ ಕಾರಣ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲ. ದಲಿತರಿಗೆ ಸಿಕ್ಕಿರುವ ಮಾದರಿ ವ್ಯಕ್ತಿಗಳಾದ ಗೌತಮ ಬುದ್ಧ, ಶಾಹುಮಹರಾಜ, ನಾರಾಯಣ್‌ಗುರು, ಸಾವಿತ್ರಬಾಯಿಫುಲೆ, ಜ್ಯೋತಿ ಬಾಫುಲೆ, ಪೆರಿಯಾರ್ ಅಂಬೇಡ್ಕರ್‌ರವರುಗಳಂತಹವರು ಭಾರತದ ಯಾವುದೇ ಸಮುದಾಯದವರಿಗೂ ಸಿಕ್ಕಿಲ್ಲ. ಮುಂದಿನ ಪೀಳಿಗೆ ಬಹಳ ಕಠಿಣವಾಗಲಿದ್ದು, ಪ್ರತಿಯೊಬ್ಬರಿಗೂ ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದಿಲ್ಲ ಮತ್ತು ವಿದ್ಯಾಭ್ಯಾಸ ಮುಗಿದ ತಕ್ಷಣ ವೃತ್ತಿ ಸಿಗುವುದು ಕಷ್ಟಸಾಧ್ಯ. ಕಾರಣ ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಲಿದ್ದು, ಉದ್ಯೋಗದ ಸಂಖ್ಯೆಗೆ ಬಹಳ ಪೈಪೋಟಿ ಮತ್ತು ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಬಹಳಷ್ಟು ಕಠಿಣ ಸಾವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಶೈಕ್ಷಣಿಕೆ ಅವಧಿಯಲ್ಲಿ ವಿದ್ಯಭ್ಯಾಸ ಜೊತೆ ಜೊತೆಗೆ ಕಂಪ್ಯೂಟರ್ – ಟೈಪಿಂಗ್ – ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಜ್ಞಾನವನ್ನು ಪಡೆಯುವುದು ಅತ್ಯವಶಕ. ಇದರ ಜೊತೆ ಪ್ರತಿಯೊಬ್ಬರು ಪದವಿ, ಸ್ನಾತಕೋತ್ತರ ಪದವಿಗಳ ಜೊತೆ ಜೊತೆಗೆ ವೃತ್ತಿಪರ ಕೋರ್ಸ್, ಪಿಹೆಚ್‌ಡಿಗಳನ್ನು ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಲವು ಕಿವಿ ಮಾತುಗಳನ್ನು ಹೇಳಿದರು.
ಇದಕ್ಕೂ ಮುನ್ನ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ವಿಷಯದ ಕುರಿತು ನಡೆದ ವಿವಿಧ ಸ್ಪರ್ಧೆಯ ವಿಜೇತರಿಗೆ, ಪಿಯುನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಅಡುಗೆ ಸಿಬ್ಬಂಧಿಗೆ ಕಾರ್ಯಕ್ರಮದ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕ ಸಿದ್ದಲಿಂಗು. ಕೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ, ವಿದ್ಯಾರ್ಥಿನಿಲಯದ ವಾರ್ಡನ್ ಪ್ರದೀಪ್ ಕೆಎಎಸ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.