ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ಪರಿಷತ್ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗಿದ್ದು, ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಸಭೆಯಲ್ಲೂ ಈ ಬಗ್ಗೆ ಸಚಿವರಿಗೆ ಸುಳಿವು ಸಿಕ್ಕಿದೆ.
ಎಂಎಲ್‌ಸಿ ಆಯ್ಕೆ ವಿಚಾರವಾಗಿ ಮೇ ೨೮, ೨೯ ರಂದು ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಇಂದು ಶನಿವಾರ ಡಿಸಿಎಂ ಕೆಲವು ಸಚಿವರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಸಭೆಯ ಬಳಿಕ ಈ ವಿಚಾರವನ್ನು ಸತೀಶ್ ಜಾರಕಿಹೊಳಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ಪುತ್ರ ಯತೀಂದ್ರಗೆ ವಿಧಾನ ಪರಿಷತ್ ಸ್ಥಾನ ಸಿಕ್ಕೇ ಸಿಗಲಿದೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಅದರ ಬಗ್ಗೆ ಮಾತುಕತೆ ಆಗಿದೆ ಎಂದು ತಿಳಿಸಿದ್ದಾರೆ.
ಡಿಸಿಎಂ ಜೊತೆಗೆ ಎಂಎಲ್‌ಸಿ ಚುನಾವಣೆ ವಿಚಾರ ಚರ್ಚೆ ಆಯ್ತು. ಪಕ್ಷಕ್ಕಾಗಿ ದುಡಿದವರು ತುಂಬಾ ಜನ ಇದ್ದಾರೆ. ಅವರನ್ನ ಪರಿಗಣಿಸಿ ಎಂದು ಹೇಳಿದ್ದೇವೆ. ವಿಧಾನ ಪರಿಷತ್ ಸದಸ್ಯ ಸ್ಥಾನ ಬೆಂಗಳೂರಿಗೆ ಸೀಮಿತ ಆಗಬಾರದು. ಜಾತಿವಾರು ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಹೇಳಿದ್ದೇವೆ ಎಂದರು.