ಮೈಸೂರು: ಚನ್ನಗಿರಿ ಲಾಕಪ್ ಡೆತ್ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅದು ಲಾಕಪ್ ಡೆತ್ ಅಲ್ಲ. ಅವನಿಗೆ ಮೂರ್ಛೆ ರೋಗ ಇತ್ತು. ಆ ರೋಗದಿಂದ ಆತ ಮೃತಪಟ್ಟಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂದು ಶನಿವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಎಫ್‌ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ ಆದೇಶ ಮಾಡಿದ್ದೇನೆ. ಆದರೆ ಇದು ಲಾಕಪ್ ಡೆತ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರು.
ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ವಿಚಾರದ ಕುರಿತು ಸರ್ಕಾರದಿಂದ ಕೇಂದ್ರಕ್ಕೆ ತಡವಾಗಿ ಪತ್ರ ಬಂತು ಎಂಬ ಕೇಂದ್ರ ಸಚಿವರ ಹೇಳಿಕೆ ಕುರಿತು ಮಾತನಾಡಿ, ಇದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಅಷ್ಟೇ. ನಾನು ೧೫ ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಪತ್ರ ಬರೆದರೂ ನನಗೆ ಉತ್ತರ ಬಂದಿಲ್ಲ. ಒಂದು ವೇಳೆ ನಾನು ಪತ್ರ ಬರೆದದ್ದು ತಡವೇ ಅಂದುಕೊಳ್ಳಿ. ಈಗ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಹೇಳಿ. ಸುಮ್ಮನೇ ಕಾಲ ಕಳೆಯುವುದನ್ನು ಬಿಡಬೇಕು ಎಂದು ತಿರುಗೇಟು ನೀಡಿದರು.
ರೇಪ್‌ಗಿಂತ ಅದರ ವೀಡಿಯೋ ಹಂಚಿದ್ದು ದೊಡ್ಡ ಅಪರಾಧ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರೇಪ್‌ಗಿಂತ ವೀಡಿಯೋ ಹಂಚಿದ್ದು ದೊಡ್ಡ ಅಪರಾಧ ಅಂಥ ಯಾವ ಕಾನೂನಿನಲ್ಲಿದೆ ಹೇಳಿ ಕುಮಾರಸ್ವಾಮಿ ಏನಾದರೂ ಸೆಕ್ಷನ್ ಹೇಳಿದ್ದರಾ ಅದು ಭಾರತೀಯ ದಂಡ ಸಂಹಿತೆಯಲ್ಲಿದೆಯಾ ಅಥವಾ ಇವರೇ ಬರೆದುಕೊಂಡ ಕಾನೂನಿನಲ್ಲಿ ಇದೆಯಾ ಹೇಳಿ. ನಾನು ಹಾಗಂತ ವೀಡಿಯೋ ವಿತರಣೆ ಸಮರ್ಥನೆ ಮಾಡುತ್ತಿಲ್ಲ. ಆದರೆ ರೇಪ್‌ಗಿಂತ ವೀಡಿಯೋ ಹಂಚಿದ್ದು ಮಹಾ ಅಪರಾಧ ಎನ್ನುವುದು ಸರಿಯಲ್ಲ ಎಂದು ಹೇಳಿದರು.