ಮೈಸೂರು: ಅಂಬೇಡ್ಕರ್‌ರವರು ನಿಜವಾಗಿ ಗರ್ಜಿಸಿದ ಸಿಂಹವಾಗಿದ್ದರು. ಅವರ ತಾಕತ್ತು ಅವರು ಸಂಪಾದಿಸಿದ ಜ್ಞಾನದ ಸಂಪತ್ತಾಗಿತ್ತು. ಆದ್ದರಿಂದ ವಿದ್ಯಾರ್ಥಿಗಳು ಅಂಬೇಡ್ಕರ್ ಮಾರ್ಗದಲ್ಲಿ ಹೆಜ್ಜೆಗಳನ್ನು ಇಡಿ ಎಂದು ಬಿ.ಎನ್. ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸ್‌ನ ಪ್ರೊ. ಡಿ. ಆನಂದ್ ಕರೆ ನೀಡಿದರು.
ವಿಜಯನಗರದ ೩ನೇ ಹಂತದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ಸಂಜೆ ನಡೆದ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೩ನೇ ಜನ್ಮದಿನಚರಣೆ ಅಂಗವಾಗಿ ನಡೆದ ಜ್ಞಾನೋತ್ಸವ-೨೦೨೪ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರ್ ಹುಟ್ಟಿದ ದಿನವನ್ನು ಜ್ಞಾನದ ದಿನವಾಗಿ ವಿಶ್ವಸಂಸ್ಥೆ ಘೋಷಿಸಿರುವುದು ಜಗತ್ತಿನ ವಿಸ್ಮಯವಾಗಿದೆ. ಅಂಬೇಡ್ಕರ್ ವೈಜ್ಞಾನಿಕ ಚಿಂತನೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಶೋಷಣೆಯ ಮೂಲ ದೌರ್ಬಲ್ಯವಾಗಿರುವುದರಿಂದ ನಿಮ್ಮ ನಿಮ್ಮ ದೌರ್ಬಲ್ಯಗಳನ್ನು ಗುರುತಿಸಿಕೊಳ್ಳಿ ಎಂದರು.
ಮೇಲ್ವರ್ಗದವರು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ನಮ್ಮನ್ನು ಕಟ್ಟಿಹಾಕಿದರು. ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಕೆಳವರ್ಗದವರಿಗೆ ಸಂಸ್ಕೃತ ಓದಲು ಬಿಡಲಿಲ್ಲ, ಶಾಲಾ ಕಾಲೇಜುಗಳಿಂದ ದೂರವಿಟ್ಟರು. ಇದನ್ನು ಅರಿತ ಅಂಬೇಡ್ಕರ್‌ರವರು ಈ ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ತಿಳಿದುಕೊಂಡಿದ್ದ ಅಂಬೇಡ್ಕರ್ ೩೫ ವರ್ಷಗಳ ಕಾಲ ಓದುವುದಕ್ಕೆ ಮೀಸಲಿಟ್ಟರು. ಆದ್ದರಿಂದ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು, ಜ್ಞಾನಭಂಡಾರವನ್ನು ತುಂಬಿಸಿಕೊಳ್ಳಬೇಕು. ವಿಶಿಷ್ಠವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು, ಚಿಂತನಾಶೀಲರಾಗಬೇಕು. ನಿಮ್ಮ ಉದ್ಧಾರ ನಿಮ್ಮಿಂದಲೇ ಆಗಬೇಕು. ಅಂಬೇಡ್ಕರ್ ವಿಚಾರಗಳನ್ನು ಹೆಚ್ಚಾಗಿ ಓದಿಕೊಳ್ಳಿರಿ. ಅಂಬೇಡ್ಕರ್ ನಿಮಗೆಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಸಮಾರಂಭದಲ್ಲಿ ಡಾ. ಕೆ.ಎಲ್. ಚಂದ್ರಶೇಖರ್, ಐಜೂರು ಎಂ. ತಿಬ್ಬಯ್ಯ, ಸಹಾಯಕ ನಿರ್ದೇಶಕ ಕೆ. ಸಿದ್ದಲಿಂಗು ಮಾತನಾಡಿದರು. ನಿಲಯಪಾಲಕರಾದ ಕೆ.ಎ.ಎಸ್. ಪ್ರದೀಪ್, ಶಿವಮಲ್ಲಯ್ಯ, ಚಿಕ್ಕೀರಯ್ಯ, ರಾಜೇಶ್ವರಿ, ವಸಂತಕುಮಾರಿ, ಗಾಯತ್ರಿ, ಕಮಲಾಕ್ಷಿ, ಶಿವಪ್ಪ, ಮಹೇಶ್, ಕಾರ್ತಿಕ್, ಹುಯ್ಯಂಬಳ್ಳಿ ಚೇತನ್ ಹಾಜರಿದ್ದರು. ಈ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.