ಪುಣೆ: ಪೋರ್ಷೆ ಕಾರು ಅಪಘಾತದ ಆರೋಪಿ ವೇದಾಂತ್ ಅಗರ್ವಾಲ್ ಅವರ ರಕ್ತದ ಮಾದರಿಯನ್ನು ಬದಲಿಸಿದ್ದ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆಯಲ್ಲಿ 17 ವರ್ಷದ ಬಾಲಕ ವೇದಾಂತ್ ಅಗರ್ವಾಲ್ ಐಷಾರಾಮಿ ಪೋರ್ಷೆ ಕಾರನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡು ಹೋಗಿ ಬೈಕ್ಗೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದಾದ ಬಳಿಕ ಪೊಲೀಸರು ಬಾಲಾಪರಾಧಿ ನ್ಯಾಯಾಲಯದ ತೀರ್ಪಿನಂತೆ ವೇದಾಂತ್ರನ್ನು ಬಂಧಿಸಿ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಬಳಿಕ ತಂದೆ ವಿಶಾಲ್ ಅಗರ್ವಾಲ್ ರನ್ನು ಬಂಧಿಸಿದ್ದರು.
ಎಲ್ಲೆಡೆ ಪೊಲೀಸರ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಮೀನನ್ನು ರದ್ದುಗೊಳಿಸಿ ಮತ್ತೆ ಬಂಧಿಸಲಾಗಿತ್ತು. ಮೊದಲು ವಿಶಾಲ್ ಅಗರ್ವಾಲ್ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ ಕಾರಿಗೆ ಬೇರೆ ಡ್ರೈವರ್ ಇದ್ದಾರೆ ಎಂದು ಹೇಳಿದ್ದರು. ಕಾರು ಚಾಲಕನನ್ನು ಪೊಲೀಸರು ಪ್ರಶ್ನಿಸಿದಾಗ ಆತ ಇಲ್ಲ ವಿಶಾಲ್ ಅವರೇ ತಮ್ಮ ಮಗನೇ ಕಾರು ಓಡಿಸುತ್ತಾನೆ ನೀನು ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತುಕೋ ಎಂದಿದ್ದರು ಎಂಬ ಮಾಹಿತಿಯನ್ನು ನೀಡಿದ್ದಾರೆ.
ಇದೆಲ್ಲಾ ನಡೆದ ಬಳಿಕ ಆತ ಮದ್ಯಪಾನ ಮಾಡಿರಲಿಲ್ಲ ಎನ್ನುವ ವರದಿ ಆಸ್ಪತ್ರೆಯಿಂದ ಹೊರಬಿದ್ದಿತ್ತು. ಅದನ್ನು ತನಿಖೆ ಮಾಡಿದ ಬಳಿಕ ವೇದಾಂತ್ರ ರಕ್ತದ ಮಾದರಿಯನ್ನು ಬದಲಾಯಿಸಲಾಗಿದೆ ಎನ್ನುವುದನ್ನು ಅರಿತ ಪೊಲೀಸರು ರಕ್ತದ ಮಾದರಿಯನ್ನು ತಿರುಚಿದ ಆರೋಪದ ಮೇಲೆ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ವೈದ್ಯರ ಈ ನಡೆಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಶನಿವಾರ ಮುಂಜಾನೆ, ಚಾಲಕನನ್ನು ಅಪಹರಿಸಿ, ಬೆದರಿಕೆ ಹಾಕಿದ್ದಕ್ಕಾಗಿ ಮತ್ತು ಚಾಲಕನಿಗೆ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಕ್ಕಾಗಿ ಬಾಲಕನ ಅಜ್ಜನನ್ನು ಬಂಧಿಸಲಾಗಿದೆ.