ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ೬ ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬ ನಗರದ ಕೆಂಚಪ್ಪ ಲೇಔಟ್‌ನಲ್ಲಿ ನಡೆದಿದೆ.
ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ್ (೫೨) ಆತ್ಮಹತ್ಯೆ ಮಾಡಿಕೊಂಡವರು. ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ ೧೮೭ ಕೋಟಿ ಹಗರಣಕ್ಕೆ ಬೇಸತ್ತು, ತನ್ನ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಕೆಲ ಅಧಿಕಾರಿಗಳ ಹೆಸರು ಬರೆದಿಟ್ಟು ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ೧೮೭ ಕೋಟಿ ರೂ. ಬೃಹತ್ ಹಗರಣ ನಡೆದಿದೆ. ಅದರಲ್ಲಿ ೮೫ ಕೋಟಿ ರೂ. ಹಣವನ್ನು ಕಾನೂನು ಬಾಹಿರವಾಗಿ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಅಕೌಂಟೆಂಟ್ ಹಾಗೂ ಅಧಿಕಾರಿಗಳು ಮಾಡಿದ ತಪ್ಪನ್ನು ನನ್ನ ಮೇಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಪದ್ಮನಾಭ, ಅಕೌಂಟ್ ವ್ಯವಸ್ಥಾಪಕ ಪರಶುರಾಮ್ ದುರ್ಗಣ್ಣನವರ್ ಹಾಗೂ ಯೂನಿಯನ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶುಚಿಸ್ಮಿತ ಇವರೇ ನನ್ನ ಸಾವಿಗೆ ಕಾರಣ ಎಂದು ಚಂದ್ರಶೇಖರ್ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.