ಮದ್ದೂರು: ಕೆ.ಕೋಡಿಹಳ್ಳಿ ಬಳಿಯ ರೈತರ ಜಮೀನೊಂದರಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ.
ಬೆಳ್ಳಂಬೆಳ್ಳಿಗ್ಗೆ ಹೊಳೆ ಆಂಜನೇಯನ ದೇಗುಲದ ಶಿಂಷಾ ನದಿಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದವು. ಇದೀಗ ಜಮೀನೊಂದರಲ್ಲಿ 6 ಕಾಡಾನೆಗಳ ಹಿಂಡು ಕಾಣಿಸಿಕೊಂಡಿವೆ.

ಸ್ಥಳಕ್ಕೆ ಆಗಮಿಸಿರುವ ಅರಣ್ಯಾಧಿಕಾರಿಗಳು, ಆನೆಗಳು ಬೀಡುಬಿಟ್ಟಿರುವ ಹಿನ್ನಲೆ ಹತ್ತಿರ ಹೋಗದಂತೆ ಜನರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಅರಣ್ಯಾಧಿಕಾರಿ ಗವಿಯಪ್ಪ ಮಾತನಾಡಿ, ಚನ್ನಪಟ್ಟಣದಿಂದ 6 ಗಂಡು ಆನೆಗಳು ಮದ್ದೂರಿಗೆ ಬಂದಿವೆ. ಜನರ ಗದ್ದಲಗಳಿಂದ ಕಾಡಿನತ್ತ ತೆರಳದೆ ಜಮೀನಿನ ಬಳಿ ಬೀಡುಬಿಟ್ಟಿವೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಜೆಯ ಬಳಿಕ ಕಾರ್ಯಾಚರಣೆ ಮೂಲಕ ಮುತ್ತತ್ತಿ ಅರಣ್ಯಪ್ರದೇಶಕ್ಕೆ ಕಳುಹಿಸಲಾಗುವುದು. ಕಾಡಾನೆಗಳಿಂದ ಕೆಲವು ರೈತರ ಜಮೀನು ಬೆಳೆ ಹಾಳಾಗಿದೆ. ಸರ್ಕಾರದ ನಿಯಮದ ಪ್ರಕಾರ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.
