Sunday, April 20, 2025
Google search engine

Homeಸ್ಥಳೀಯಆಧುನಿಕತೆ ಭರಾಟೆಯಲ್ಲಿ ನಾಗರಿಕತೆ ಮರೆಯಬಾರದು

ಆಧುನಿಕತೆ ಭರಾಟೆಯಲ್ಲಿ ನಾಗರಿಕತೆ ಮರೆಯಬಾರದು


ಮೈಸೂರು: ಜಗತ್ತು ಆಧುನಿಕವಾಗಿ ವೇಗವಾಗಿ ಬೆಳೆಯುತ್ತಿದೆ. ಯುವ ವರ್ಗ ಇದರ ಆಕರ್ಷಣೆಗೆ ಒಳಗಾಗಿ ಬದುಕನ್ನು ನಡೆಸುತ್ತಿದ್ದಾರೆ. ಆದರೆ ನಮಗೆ ಪರಂಪರೆಯ ಅರಿವು ಇರಬೇಕು. ನಾಗರಿಕತೆಯ ವಿಚಾರಗಳು ತಿಳಿದಿರಬೇಕು. ಆಧುನಿಕತೆಯ ಭರಾಟೆಯಲ್ಲಿ ನಾಗರಿಕತೆಯನ್ನು ಮರೆಯಬಾರದು ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಪ್ರೊ.ಎಸ್.ಪಿ.ಉಮಾದೇವಿ ಸಲಹೆ ನೀಡಿದರು.
ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳ ವತಿಯಿಂದ ಜಿ೨೦ ಅಂಗವಾಗಿ ನಡೆದ ರಾಜ್ಯಮಟ್ಟದ ಪ್ರಬಂಧ, ಚರ್ಚೆ ಮತ್ತು ವಚನ ಓದು-ವ್ಯಾಖ್ಯಾನ ಸ್ಪಧೆ ಉದ್ಘಾಟಿಸಿ ಮಾತನಾಡಿದ ಅವರು, ಆಡಂಬರದ ಬದುಕು ನಮ್ಮದಾಗಿದೆ. ಪ್ರಚಾರ ಮತ್ತು ಅಬ್ಬರದ ನಡುವೆ ನಾವು ಕಳೆದು ಹೋಗುತ್ತಿದ್ದೇವೆ. ಆದರೆ, ಡಿವಿಜಿಯವರು ಹೇಳಿದಂತೆ ಮೊಳಕೆಯೊಡೆವ ಸಸಿ ಹೇಗೆ ಯಾವುದೇ ಗಲಾಟೆಯಿಲ್ಲದೇ ಶಾಂತವಾಗಿ ಬೆಳೆದು ನೆರಳನ್ನು ಕೊಡುತ್ತದೋ ಹಾಗೆ ನಮ್ಮ ಸಾಧನೆಗಳಿರಬೇಕು. ಒಣ ತರ್ಕದಿಂದ ಯಾವುದೇ ಪ್ರಯೋಜನವಿಲ್ಲ. ಜೀವನದ ರಸಮಯ ಸನ್ನಿವೇಶಗಳನ್ನು ಸವಿದು ಅನುಭವವನ್ನು ಸಾಂದ್ರಗೊಳಿಸಿಕೊಳ್ಳಬೇಕು. ಶೈಕ್ಷಣಿಕ ಪರೀಕ್ಷೆಗಿಂತ ಬದುಕಿನ ಪರೀಕ್ಷೆ ಭಿನ್ನವಾದುದು. ಇದನ್ನು ಜಾಣತನದಿಂದ ನಿರ್ವಹಿಸಬೇಕು. ಇಂತಹ ಕಾರ್ಯಕ್ರಮಗಳು ನಿಮಗೆ ಆ ಸಾಮರ್ಥ್ಯವನ್ನು ನೀಡುತ್ತವೆ. ಮನಸ್ಸನ್ನು ಗಟ್ಟಿಗೊಳಿಸುತ್ತವೆ. ದೃಢವಾದ ಮನಸ್ಸಿನಿಂದ ಜಗತ್ತನ್ನು ಗೆಲ್ಲಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಮುಂದಿನ ತಿಂಗಳು ನವದೆಹಲಿಯಲ್ಲಿ ಜಿ೨೦ಯ ೧೮ನೇ ಶೃಂಗಸಭೆ ನಡೆಯಲಿದೆ. ಅತ್ಯಂತ ಬೃಹತ್ತಾಗಿ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯುಳ್ಳ ದೇಶಗಳ ಮುಖಂಡರು ನಡೆಸುವ ಈ ಸಭೆಯಲ್ಲಿ ಹಣಕಾಸು, ವ್ಯಾಪಾರ, ಕೃಷಿ, ಕೈಗೆಟುಕುವ ಮತ್ತು ಉತ್ತಮವಾದ ಆರೋಗ್ಯ ರಕ್ಷಣೆ, ತಂತ್ರಜ್ಞಾನದ ಪ್ರಗತಿಗಳು, ಹೀಗೆ ವಿವಿಧ ವಿಷಯಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯಲಿದೆ. ವಿವಿಧ ದೇಶಗಳಲ್ಲಿ ಇಂತಹ ಸಭೆಗಳು ನಡೆದಿವೆ. ಭಾರತ ಈ ವರ್ಷ ಅದರ ನೇತೃತ್ವ ವಹಿಸಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿ? ಎಂಬ ಧ್ಯೇಯದ ಅಡಿಯಲ್ಲಿ ಸಭೆ ಜರುಗುತ್ತಿದೆ ಎಂದರು.
ಭಾರತ ಒಂದು ಬೃಹತ್ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದದಂತೆ ನಮ್ಮ ಕಾಲೇಜು ಕೂಡ ಜಿ೨೦ ಅಂಗವಾಗಿ ಇಂದು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ ಮತ್ತು ವಚನ ಓದು- ವ್ಯಾಖ್ಯಾನ ಸ್ಪರ್ಧೆ ಹಮ್ಮಿಕೊಂಡಿದೆ. ಆ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಒಂದು ವೇದಿಕೆ ಕಲ್ಪಿಸಲಾಗಿದೆ. ನಿಮ್ಮಗಳ ಭಾಗವಹಿಸುವಿಕೆ ಗಮನಾರ್ಹವಾದುದು. ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯವಾದುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರಕುಮಾರ್, ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್.ಸುದೀಪ್, ಕನ್ನಡ ಸ್ನಾತಕ ವಿಭಾಗದ ಮುಖ್ಯಸ್ಥೆ ಡಾ.ಎನ್.ಮಹೇಶ್ವರಿ ಅಧ್ಯಾಪಕರು, ಅಧ್ಯಾಪಕೇತರರು, ವಿವಿಧ ಕಾಲೇಜುಗಳ ೧೫೦ಕ್ಕೂ ಅಧಿಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular