Sunday, April 20, 2025
Google search engine

Homeರಾಜಕೀಯನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

ಶಿವಮೊಗ್ಗ: ಈಶ್ವರಪ್ಪ ಅವರಿಗೊಂದು ನ್ಯಾಯ ನಾಗೇಂದ್ರನಿಗೆ ಒಂದು ನ್ಯಾಯನಾ? ಈ ಹಿಂದೆ ಪ್ರಕರಣವೊಂದರಲ್ಲಿ ಕೆ.ಎಸ್ ಈಶ್ವರಪ್ಪ ರಾಜೀನಾಮೆ ಕೊಟ್ಟರು. ನಾಗೇಂದ್ರ ಯಾಕೆ ರಾಜೀನಾಮೆ ಕೊಟ್ಟಿಲ್ಲ. 87 ಕೋಟಿ ರೂ ವಂಚನೆಯಾಗಿದೆ, ಇದುವರೆಗೆ ಒಬ್ಬರೇ ಒಬ್ಬರನ್ನು ಬಂಧಿಸಿಲ್ಲ. ಪ್ರಕರಣ ಮುಚ್ಚಿ ಹಾಕಲು ಸಚಿವರನ್ನು ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ ಎಂದು ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿ ಮನೆಗೆ ಭೇಟಿ ಕೊಟ್ಟಿದ್ದೆ. ಚಂದ್ರಶೇಖರ್ ‌ಪ್ರಾಮಾಣಿಕ ಅಧಿಕಾರಿ. ಬಡವರ ಮಕ್ಕಳ ಶಿಕ್ಷಣಕ್ಕೆ ಆರೋಗ್ಯಕ್ಕೆ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಲಾಗಿತ್ತು. 87 ಕೋಟಿ ಅನ್ಯ ಕಾರ್ಯಕ್ಕೆ ವರ್ಗಾವಣೆ ಮಾಡಲಾಗಿದೆ, ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಅಧಿಕಾರಿ ಹೆಸರು ಬರೆದಿದ್ದಾರೆ ಎಂದರು.

ಪರಿಶಿಷ್ಟ ಅಭಿವೃದ್ಧಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಈ ಬಗ್ಗೆ ಗಮನ ಹರಿಸಬೇಕು. ನಿಮ್ಮ ಸಚಿವ ಶಾಮೀಲು ಆಗಿದ್ದರೂ ತಕ್ಷಣ ವಜಾ ಮಾಡಬೇಕಿತ್ತು. ನಿಮ್ಮ ಗೌರವ ಉಳಿಯಬೇಕಾದರೆ ಸಚಿವನನ್ನು ತಕ್ಷಣ ವಜಾ ಮಾಡಿ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಇಲ್ಲದಿದ್ದರೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅವರಿಂದ ತನಿಖೆ ಮಾಡಿಸಿ. ಇಲ್ಲದಿದ್ದರೆ‌ ಈ ಪ್ರಕರಣದಲ್ಲಿ ನಿಮ್ಮ ಕೈವಾಡ ಇದೆಯೇನೋ ಎಂಬ ಅನುಮಾನ ಬರುತ್ತದೆ ಎಂದರು.

ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು. ಪೆನ್ ಡ್ರೈವ್ ಅನ್ನು ಕುಟುಂಬದ ಗಮನಕ್ಕೆ ತರದೇ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ ಏನಿತ್ತು ಎಂಬ ಬಗ್ಗೆ ಬಹಿರಂಗ ಆಗಬೇಕು. ಸಚಿವರನ್ನು ವಜಾ ಮಾಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಸಚಿವ ನಾಗೇಂದ್ರ ವಜಾ ಮಾಡದಿದ್ದರೆ ಹೋರಾಟ ಮಾಡುತ್ತೇವೆ. ವಜಾ ಮಾಡದಿದ್ದರೆ ವಿಧಾನಸಭಾ ಕಲಾಪದಲ್ಲೂ ಹೋರಾಟ ಮಾಡುತ್ತೇವೆ. ರಾಜ್ಯಪಾಲರಿಗೆ ಈ ಬಗ್ಗೆ ದೂರು ಕೊಡುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

RELATED ARTICLES
- Advertisment -
Google search engine

Most Popular