ಮಂಡ್ಯ: ಮರಿತಿಬ್ಬೇಗೌಡ ಪಕ್ಷಾಂತರ ಮಾಡಿಲ್ಲ, ಬದಲಿಗೆ ಉಸಿರುಗಟ್ಟಿದ ವಾತಾವರಣದಿಂದ ಬಿಡುಗಡೆ ಆಗಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನ ಬೆಂಬಲಿಸಿ ಎಂದು ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ್ ಹೇಳಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ವಿಶೇಷವಾದ ಚುನಾವಣೆಯಾಗಿದೆ. ದಿನೇಶ್ ಗೂಳಿಗೌಡರು ಕಠಿಣ ಸನ್ನಿವೇಶದಲ್ಲಿ ಗೆದ್ದು ಶಾಸಕರಾಗಿದ್ದಾರೆ. ಅದೇ ರೀತಿ ಮಧು ಜಿ ಮಾದೇಗೌಡರು ಇತಿಹಾಸ ಸೃಷ್ಟಿಸಿದ್ದಾರೆ. ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡರ ಗೆಲುವು ಖಚಿತ ಎಂದು ತಿಳಿಸಿದರು.
ಮರಿತಿಬ್ಬೇಗೌಡರು ಜೆಡಿಎಸ್ ಪಕ್ಷದಲ್ಲಿದ್ದವರು. ಅವರು ಪಕ್ಷಾಂತರ ಮಾಡಿಲ್ಲ, ಬದಲಿಗೆ ಉಸಿರು ಕಟ್ಟಿದ ಜೆಡಿಎಸ್ ಪಕ್ಷದಿಂದ ಬಿಡುಗಡೆಯಾಗಿದ್ದಾರೆ. ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಬಡವರನ್ನು ಮೇಲೆತ್ತುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗ್ಯಾರಂಟಿ ಯೋಜನೆ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿದೆ ಎಂದರು.
ದಕ್ಷಿಣ ಪದವೀಧರ ಕ್ಷೇತ್ರದ ಮತದಾರರು ಗ್ಯಾರಂಟಿ ಯೋಜನೆಗಳ ಬಗ್ಗೆ ಮೌಲ್ಯಮಾಪನ ಮಾಡುತ್ತಾರೆ. ಅದೇ ರೀತಿ ಮೋದಿ ಅವರ ಹತ್ತು ವರ್ಷದ ಆಡಳಿತದ ಬಗ್ಗೆ ಮೌಲ್ಯಮಾಪನ ಮಾಡಬೇಕು. ಮೋದಿ ಅವರ ವೈಫಲ್ಯವನ್ನು ಈ ಚುನಾವಣೆಯಲ್ಲಿ ಅಳತೆ ಮಾಡಬೇಕು. ಇಡೀ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಮತ್ತು ಜೆಡಿಎಸ್ ಅಪವಿತ್ರಗೊಳಿಸಿದೆ. ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಯಾವುದೇ ಅಳತೆಗಳು ಇಟ್ಟುಕೊಳ್ಳದೆ ಆಯ್ಕೆ ಮಾಡಲಾಗಿದೆ. ಮೈತ್ರಿ ಅಭ್ಯರ್ಥಿಯ ಅರ್ಹತೆ ಏನು ಎಂದು ಪ್ರಶ್ನಿಸಿದರು.
ಶಿಕ್ಷಕರ ಕ್ಷೇತ್ರ ಸುಧಾರಣೆ ಆಗಿದ್ದೆ ಕಾಂಗ್ರೆಸ್ ಪಕ್ಷದಿಂದ. ಮರಿತಿಬ್ಬೇಗೌಡರ ಸಾಧನೆಗಳನ್ನು ಗಮನಿಸಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದ್ದಾರೆ. ಆದ್ದರಿಂದ ಈ ಬಗ್ಗೆ ಮತದಾರರು ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಆಡಳಿತವನ್ನು ಮೌಲ್ಯಮಾಪನ ಮಾಡಿ. ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ಯದ ಮತ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.