ದೆಹಲಿ: ದಾಖಲೆ ಮಟ್ಟದಲ್ಲಿ ತಾಪಮಾನ ಏರಿಕೆಯಾಗಿದ್ದು, ಬಿಹಾರದ ದರ್ಭಾಂಗದ ೪೦ ವರ್ಷದ ವ್ಯಕ್ತಿ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನಿನ್ನೆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಂದು ತಾಪಮಾನ ಏರಿಕೆಯಿಂದಾಗಿ ಮೃತಪಟ್ಟಿದ್ದಾರೆ. ಆ ವ್ಯಕ್ತಿಯು ಕೂಲರ್ ಅಥವಾ ಫ್ಯಾನ್ ಇಲ್ಲದ ಮನೆಯಲ್ಲಿ ವಾಸಿಸುತ್ತಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ. ದೇಹದ ಉಷ್ಣತೆಯು ೧೦೭ ಡಿಗ್ರಿ ಸೆಲ್ಸಿಯಸ್ ಮಾರ್ಕ್ ಅನ್ನು ದಾಟಿದೆ. ಸಾಮಾನ್ಯಕ್ಕಿಂತ ಸುಮಾರು ೧೦ ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಬೇಸಿಗೆಯಲ್ಲಿ ದೆಹಲಿಯಲ್ಲಿ ತಾಪಮಾನದಿಂದಾಗಿ ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ.
ದೆಹಲಿಯಲ್ಲಿ ೫೨.೩ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ದೇಶದಲ್ಲಿ ದಾಖಲಾದ ಸಾರ್ವಕಾಲಿಕ ದಾಖಲೆ ತಾಪಮಾನವಾಗಿದೆ. ತಾಪಮಾನ ಏರಿಕೆಯಾದಂತೆ ದೆಹಲಿಯಲ್ಲಿ ವಿದ್ಯುತ್ ಬಳಕೆಯೂ ಕೂಡಾ ಏರಿಕೆಯಾಗಿದೆ. ನೀರಿನ ಬಿಕ್ಕಟ್ಟು ಕೂಡಾ ಉಂಟಾಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ತಾಪಮಾನ ಕುಸಿತ ಕಾಣುತ್ತಿದೆ. ಆದರೆ ಕೆಲವೆಡೆ ತಾಪಮಾನ ಇನ್ನೂ ಸರಾಸರಿ ೪೫-೫೦ ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಂ ಮಹಪಾತ್ರ ಹೇಳಿದ್ದಾರೆ.