ಲೂಧಿಯಾನ: ಇಂಡಿಯಾ ಒಕ್ಕೂಟವು ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ ಮಾಡುತ್ತದೆ ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡುತ್ತದೆ, ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಪಕ್ಷದ ಲೂಧಿಯಾನ ಅಭ್ಯರ್ಥಿ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಪರವಾಗಿ ಲುಧಿಯಾನದ ಮುಲ್ಲನ್‌ಪುರ್ ದಖಾದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ರದ್ದುಪಡಿಸಲಿದೆ ಎಂದು ಆರೋಪಿಸಿದ್ದು, ೨೦೨೪ರ ಲೋಕಸಭೆ ಚುನಾವಣೆಯು ಸಂವಿಧಾನವನ್ನು ಉಳಿಸಲು ನಡೆಯುತ್ತಿರುವ ಚುನಾವಣೆ ಎಂದರು. ಮೊದಲ ಬಾರಿಗೆ, ಒಂದು ಪಕ್ಷ ಮತ್ತು ಅದರ ನಾಯಕರು ಚುನಾವಣೆಯಲ್ಲಿ ಗೆದ್ದರೆ ಸಂವಿಧಾನವನ್ನು ಬದಲಾಯಿಸುತ್ತೇವೆ ಮತ್ತು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಬಿಜೆಪಿ ನಾಯಕರುಗಳ ಸಂವಿಧಾನ ಬದಲಾಯಿಸುವ ಹೇಳಿಕೆ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ಸಂವಿಧಾನದ ಪ್ರತಿಯನ್ನು ಹಿಡಿದು, ಇದು ಪುಸ್ತಕವಲ್ಲ, ಜನರ ಧ್ವನಿ ಎಂದು ಹೇಳಿದರು.
ರೈತ ಸ್ನೇಹಿ ಬೆಳೆ ವಿಮಾ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದ ರಾಹುಲ್ ಗಾಂಧಿ ಪ್ರಸ್ತುತ ಯೋಜನೆಯಿಂದ ಕೇವಲ ೧೬ ವಿಮಾ ಕಂಪನಿಗಳಿಗೆ ಲಾಭವಾಗಿದೆ ಎಂದು ಆರೋಪಿಸಿದರು. ಮಹಾಲಕ್ಷ್ಮಿ ಯೋಜನೆ ಸೇರಿದಂತೆ ತಮ್ಮ ಪಕ್ಷದ ಚುನಾವಣಾ ಭರವಸೆಗಳ ಬಗ್ಗೆಯೂ ರಾಹುಲ್ ಗಾಂಧಿ ಪ್ರಸ್ತಾಪ ಮಾಡಿದ್ದಾರೆ.