ಹಾಸನ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ, ಫೋಟೋಗಳಿರುವ ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬಿಜೆಪಿಯ ಮಾಜಿ ಶಾಸಕ ಪ್ರೀತಂಗೌಡ ಆಪ್ತರಿಬ್ಬರಿಗೆ ಜಾಮೀನು ಲಭಿಸಿದೆ.
ಆರೋಪಿಗಳಾದ ಚೇತನ್ ಹಾಗೂ ಲಿಖಿತ್ ಗೌಡ ಎಂಬುವವರಿಗೆ ಮೂರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಆರು ಮತ್ತು ಏಳನೇ ಆರೋಪಿಗಳಾಗಿದ್ದ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರಾದ ಯಲಗುಂದ ಚೇತನ್ ಹಾಗೂ ಲಿಖಿತ್‌ಗೌಡರನ್ನು ಮೇ ೧೨ರಂದು ಎಸ್‌ಐಟಿ ತಂಡ ಬಂಧಿಸಿ ವಿಚಾರಣೆ ನಡೆಸಿದ ನಂತರ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಹದಿನೆಂಟು ದಿನಗಳ ಬಳಿಕ ಇಬ್ಬರು ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ.
ಸದ್ಯ ಹಾಸನದ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಚೇತನ್ ಹಾಗೂ ಲಿಖಿತ್‌ಗೌಡ ಇದ್ದು, ಇಂದು ಸಂಜೆ ಅಥವಾ ನಾಳೆ (ಶುಕ್ರವಾರ) ಇಬ್ಬರೂ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಬ್ಬರು ಆರೋಪಿಗಳ ಪರ ವಕೀಲ ಹರೀಶ್ ಬಾಬು ವಾದ ಮಂಡಿಸಿದ್ದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಅಶ್ಲೀಲ ವಿಡಿಯೊ ವೈರಲ್ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರು ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಗೌಡ ಹಾಗೂ ಚೇತನ್‌ನನ್ನು ಮೂರು ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ.