ಮೈಸೂರು: ಸಮಯ ಎಂಬುದು ಬಹಳ ಅಮೂಲ್ಯ ವಾದದ್ದು. ಒಮ್ಮೆ ಅದು ಕಳೆದು ಹೋದರೆ ಮತ್ತೆಂದೂ ಅದು ಮರಳಿ ಬಾರದು. ಹಾಗಾಗಿ ವ್ಯರ್ಥವಾಗಿ ಕಾಲ ಕಳೆಯದೆ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವುದನ್ನು ಪ್ರಾಥಮಿಕ ಶಾಲೆಯ ಕಲಿಕೆಯ ಹಂತದಿಂದಲೇ ಕಲಿಯ ಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀ ಕೃಷ್ಣ ಲಲಿತ ಕಲಾಮಂದಿರದ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿ – ಕಿಡ್ಸ್ ಫ್ರೀಸ್ಕೂಲ್ ಸಂಯುಕ್ತವಾಗಿ ಶಾಲಾ ಆವರಣದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗಾಗಿ ಇಂದು ಹಮ್ಮಿಕೊಂಡಿದ್ದ ಸ್ವಾಗತ ಮತ್ತು ಶಾಲಾ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ವೇಗದ ಯುಗವಾಗಿದ್ದು ಕ್ಷಣ ಕ್ಷಣಕ್ಕೂ ಕಾಲ ಮಿಂಚಿನಂತೆ ಓಡುತ್ತಿರುತ್ತದೆಯಾದ್ದರಿಂದ ಕಾಲ ಇದ್ದಾಗಲೇ ಸಾಧನೆಯ ಮೆಟ್ಟಿಲುಗಳನ್ನು ಏರುವ ಪ್ರಯತ್ನವನ್ನು ಮಕ್ಕಳು ಮಾಡಬೇಕೆಂದರು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಓದುವ ವಯಸ್ಸು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಓದುವುದಕ್ಕಿಂತ ಬೇರಾವುದೂ ಮುಖ್ಯವಾಗಬಾರದು. ಈಗ ಎಲ್ಲರಿಗೂ ಓದುವುದೇ ಕೆಲಸವಾಗಬೇಕು. ಮುಂದೆ ಇದೇ ಓದು ಉದ್ಯೋಗವನ್ನೂ ಹಾಗೂ ಉತ್ತಮ ಭವಿಷ್ಯವನ್ನೂ ಕಟ್ಟಿಕೊಡುತ್ತದೆ. ತಂದೆ ತಾಯಿಗಳು ಗುರು ಹಿರಿಯರ ಆಸೆ ಹಾಗು ಆಶಯಗಳನ್ನು ಅರ್ಥ ಮಾಡಿಕೊಂಡು ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ವಿದ್ಯಾರ್ಥಿಗಳು ಕಾಲ ಪ್ರಜ್ಞೆಯೊ ಡನೆ ಓದಿನತ್ತ ಆಸಕ್ತಿತಾಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದ ವಿದ್ಯಾಭ್ಯಾಸದ ಹಾದಿಯಲ್ಲಿ ಈಗ ಇಪ್ಪತ್ತು, ಇಪ್ಪತೈದು ವರ್ಷಗಳು ಕಷ್ಟಪಟ್ಟು ಓದಿದರೆ ಮುಂದಿನ ಎಪ್ಪತೈದಕ್ಕೂ ಹೆಚ್ಚಿನ ವರ್ಷಗಳು ಸುಖದಿಂದ ಇರಬಹುದೆಂದು ತಿಳಿಸಿದರು.
ಇದಕ್ಕೂ ಮುನ್ನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ಪರಮೇಶ್ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿ ಅತಿಥಿ ಗಳನ್ನು ಸ್ವಾಗತಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಗುಲಾಬಿ ಹೂವಿನ ಜೊತೆ ಲೇಖನ ಸಾಮಗ್ರಿಗಳೊಡನೆ ಸಿಹಿ ನೀಡಿ ಎಲ್ಲರನ್ನೂ ಶಾಲೆಗೆ ಆತ್ಮೀಯವಾಗಿ ಬರಮಾಡಿ ಕೊಂಡರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಎಸ್.ಮಹೇಶ್ವರಿ ಮತ್ತು ಕಲ್ಪನಾ ಹಾಗೂ ವಿ- ಕಿಡ್ಸ್ ಫ್ರೀ ಸ್ಕೂಲ್ ನ ಅನಿತಾ, ವಿದ್ಯಾ ಹಾಗು ಫರೋನ ಇನ್ನಿತರರಿದ್ದರು.