ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೂಸಿನ ಮನೆ ಆಸರೆಯಾಗಿದೆ. ಗ್ರಾಮ ಪಂಚಾಯಿತಿಗೆ ಒಂದರಂತೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಆರಂಭಿಸಿರುವ ೨೮ ಕೂಸಿನ ಮನೆಗಳು ಗ್ರಾಮ ಪ್ರದೇಶದ ಮಕ್ಕಳಿಗೆ ಅನುಕೂಲ ವಾಗಿದೆ, ಕೂಸಿನ ಮನೆ ದಿನಗಳಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೪ ರ ವರೆಗೆ ಕಾರ್ಯನಿರ್ವಹಿಸುತ್ತಿದ್ದು, ಆರು ತಿಂಗಳಿಂದ ಮೂರು ವಷದ ಒಳಗಿನ ಮಕ್ಕಳ ಆರೈಕೆಯಲ್ಲಿ ಕೂಸಿನ ಮನೆ ತೊಡಗಿಸಿಕೊಂಡಿವೆ.
ಅಂಗನವಾಡಿ, ಶಾಲೆ, ಬಳಕೆಯಲ್ಲಿ ಇಲ್ಲದ ಇತರೆ ಸರ್ಕಾರಿ ಕಚೇರಿಗಳಲ್ಲಿ ಎರಡು ತಿಂಗಳ ಹಿಂದೆ ಕೂಸಿನ ಮನೆ ಶುರು ಮಾಡಲಾಗಿದೆ. ಆರಂಭದಲ್ಲಿ ಮಕ್ಕಳು ನಿರೀಕ್ಷಿತ ಪ್ರಮಾಣದಲ್ಲಿ ಕೂಸಿನ ಮನೆಗೆ ಬಂದಿರಲಿಲ್ಲ. ಪಂಚಾಯಿತಿ ಹಾಗೂ ಶಿಶು ಆರೈಕೆದಾರರ ಜಾಗೃತಿಯ ಫಲವಾಗಿ ಮಹಿಳಾ ಕಾರ್ಮಿಕರು ಕೂಸಿನ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗಲಾರಂಭಿಸಿದ್ದಾರೆ. ಪರಿಣಾಮವಾಗಿ, ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.
ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿ ಗ್ರಾಮದ ಕೂಸಿನ ಮನೆಯಲ್ಲಿ ಪ್ರಾರಂಭದಲ್ಲಿ ಕಾರ್ಮಿಕರ ಐದು ಮಕ್ಕಳು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದರು. ಈಗ ಸಂಖ್ಯೆ ೧೫ ಕ್ಕೆ ಏರಿದೆ. ಕೋಡಂಬಳ್ಳಿ, ಇಗ್ಗಲೂರು, ರಾಂಪುರ, ಚೆಕ್ಕೆರೆ, ಬಿ.ವಿ ಹಳ್ಳಿ, ಭೂಹಳ್ಳಿ, ಸೋಗಾಲ, ದಶವಾರ, ಬೇವೂರು, ಕೂಡ್ಲೂರು, ಸೇರಿದಂತೆ ೨೮ ಗ್ರಾಮ ಪಂಚಾಯಿತಿಗಲ್ಲಿ ಕೂಸಿನ ಮನೆ ಪ್ರಾರಂಭವಾಗಿದ್ದು ತಾಲ್ಲೂಕಿನ ಬಹುತೇಕ ಕೂಸಿನ ಮನೆಗಳಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಿದೆ. ಕೆಲಸಕ್ಕೆ ಹೋಗುವ ಮಹಿಳಾ ಕಾರ್ಮಿಕರಿಗೆ ( ಪೋಷಕರು) ಕೂಸಿನ ಮನೆ ಅನುಕೂಲವಾಗಲಿದೆ. ಉಳಿದ ೪ ಪಂಚಾಯಿತಿಗಳಾದ ಮಳೂರು, ವಂದಾರಗುಪ್ಪೆ, ಮತ್ತಿಕೆರೆ, ಮಾಕಳಿ ಗಳಲ್ಲಿ ಮುಂದಿನ ಮೂರು -ನಾಲ್ಕು ತಿಂಗಳಲ್ಲಿ ಪ್ರಾರಂಭವಾಗಲಿವೆ.

ಅಭಿವ್ಯಕ್ತ ಕುಟುಂಬದಿಂದ ವಿಭಕ್ತ ಕುಟುಂಬಗಳಾಗಿ ಬದಲಾಗಿರುವ ಸಮಾಜದಲ್ಲಿ ಕೆಲಸದ ಅವಶ್ಯಕತೆ ಹೆಚ್ಚಿದ್ದು ಅಂತಹ ಪೋಷಕರಿಗೆ ಕೂಸಿನ ಮನೆ ಅನುಕೂಲವಾಗಿದೆ. ತಾಯಂದಿರು ಏನೆ ಊಟ ಸಿಕ್ಕರು ಮಕ್ಕಳಿಗೆ ಕೊಡುತ್ತಾರೆ. ಇದರಿಂದ ತಾಯಂದಿರು ಅಪೌಷ್ಠಿಕತೆಗೆ ಒಳಗಾಗುತ್ತಿದ್ದರು. ಈಗ ಮಕ್ಕಳಿಗೆ ಕೂಸಿನ ಮನೆಯಲ್ಲೆ ಪೌಷ್ಠಿಕ ಆಹಾರ ನೀಡುವುದರಿಂದ ಮಕ್ಕಳಿಗೆ ನೀಡುತ್ತಿದ್ದ ಆಹಾರ ತಾಯಂದರಿಗೆ ಸಿಗುತ್ತಿದೆ. ಇದರಿಂದ ತಾಯಿ-ಮಗುವಿನ ಅಪೌಷ್ಠಿಕತೆ ನಿವಾರಣೆಗೆ ಕೂಸಿನ ಮನೆ ಯೋಜನೆಯು ಉತ್ತಮ ಮಾರ್ಗವಾಗಿದೆ.