ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಹಾಲಿನ ಡೈರಿ ಬೀದಿಯ ಸೈಟ್ ನ ಮನೆಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿಲ್ಲ ಎಂದು ಸೈಟ್ ಮನೆಗಳ ಮಹಿಳೆಯರು ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಖಾಲಿ ಕೊಡಗಳನ್ನು ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು .
ಪ್ರತಿಭಟನೆ ನಿರತ ಮಹಿಳೆ ಹೇಮ ಮಾತನಾಡಿ ಸುಮಾರು 15 ದಿನಗಳಿಂದ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿಲ್ಲ, ಅಲ್ಲದೆ ರಸ್ತೆ, ಚರಂಡಿ ವ್ಯವಸ್ಥೆ ಸರಿ ಇಲ್ಲ. ಗ್ರಾಮ ಪಂಚಾಯತಿ ಸದಸ್ಯರು ಚುನಾವಣಾ ಸಂದರ್ಭದಲ್ಲಿ ಬಂದು ಮತ ಕೇಳಿ ಹೋದವರು ನಾಪತ್ತೆಯಾಗಿದ್ದಾರೆ. ಮೇಲಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ನಮಗೆ ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದರು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರ್ ಮಾತನಾಡಿ ಜೆ ಜೆ ಎಂ ಕಾಮಗಾರಿ ನಡೆಯುತ್ತಿರುವುದರಿಂದ ಸ್ವಲ್ಪ ಸಮಸ್ಯೆಯಾಗಿದ್ದು,ಸಂಜೆಯೊಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಪಿಡಿಒ, ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಂದು ರಸ್ತೆ ಮತ್ತು ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗೌರಮ್ಮ, ಲತಾ, ಶೀಲಾ, ಜಯಲಕ್ಷ್ಮಮ್ಮ, ನಾಗಮ್ಮ, ಪಾರ್ವತಮ್ಮ, ಸಾಕಮ್ಮ, ನಾಗಮ್ಮ, ಪೂಜಾ, ಶಾರದಮ್ಮ, ಸಚಿನ್, ಪುನೀತ್, ಸಿ ಎನ್ ರಾಜೇಶ್, ನಂಜುಂಡೇಗೌಡ,ಈಶ್ವರ ಚಾರಿ,ನಂಜುಂಡ ಚಾರಿ, ಮಹೇಶ್ ಮೂರ್ತಿ, ಹರೀಶ್ ಹಾಜರಿದ್ದರು.