ಮೈಸೂರು: ‘ನಂದಿನಿ ಹಾಲು ಕೇಳಿ ಪಡೆಯಿರಿ’, ‘ ಶುದ್ಧ, ಆರೋಗ್ಯಕರ ನಂದಿನಿ ಪ್ರತಿ ಮನೆಯ ಗೆಳೆಯ’, ‘ ನಮ್ಮ ನಡೆ ನಂದಿನಿಯ ಕಡೆ’, ‘ನಂದಿನಿ ಉತ್ಪನ್ನ ಬೆಳೆಸೋಣ ರೈತರ ಋಣ ತಿರಿಸೋಣ’ ಇಂತಹ ನಾಮಫಲಕಗಳನ್ನು ಹಿಡಿದು ನೂರಾರು ಮಂದಿ ಚಳಿ ಮಂಜಿನ ನಡುವೆ ಬೈಕ್ ನಲ್ಲಿ ಸಂಚರಿಸುವ ಮೂಲಕ ವಿಶ್ವ ಹಾಲು ದಿನದ ಮಹತ್ವ, ವಿಶೇಷತೆ ಸಾರಿ ನಂದಿನಿ ಹಾಲಿನ ಬಳಕೆ ಅರಿವು ಮೂಡಿಸಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಭಿನ್ನವಾಗಿ ಪೌಷ್ಠಿಕತೆ ಮತ್ತು ಸುಸ್ಥಿರ ಹೈನು ಉದ್ಯಮದೊಂದಿಗೆ ಸಂಭ್ರಮಿಸೋಣ ಎಂಬ ದ್ಯೇಯ ವಾಕ್ಯದೊಂದಿಗೆ ಬೈಕ್ ರ್ಯಾಲಿ ನಡೆಸಿದರು. ಬನ್ನೂರು ಮುಖ್ಯರಸ್ತೆಯ ಮೈಮುಲ್ ಕಟ್ಟಡದ ಮುಂಭಾಗದಿಂದ ಪ್ರಾರಂಭಗೊಂಡ ಬೈಕ್ ಜಾಥಾದಲ್ಲಿ ನೂರಾರು ಮಂದಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಪಾಲ್ಗೊಂಡು ಸಂಭ್ರಮಿಸಿದರು.

ಬೈಕ್ ರ್ಯಾಲಿ ಟೆರಿಷಿಯನ್ ಕಾಲೇಜು ವೃತ್ತ, ಹಳೆ ಡೇರಿ ಕಟ್ಟಡ, ನಜರಬಾದ್ ಪೋಲೀಸ್ ಠಾಣೆ ಮಾರ್ಗವಾಗಿ ಸಾಗಿ ಹಾರ್ಡಿಂಜ್ ವೃತ್ತದ ಮೂಲಕ ಗೌನ್ ಹೌಸ್ ತಿರುವಿನೊಂದಿಗೆ ಶಕ್ತಿಧಾಮದಲ್ಲಿ ಅಂತ್ಯಗೊಳಿಸಿದರು.
ಬಳಿಕ ಶಕ್ತಿಧಾಮದ ಮಕ್ಕಳಿಗೆ ವಿಶ್ವ ಹಾಲು ದಿನದ ಅಂಗವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಪೇಡ ಸಿಹಿಯನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಜೂ.1 ರಂದು ಅಂತಾರಾಷ್ಟ್ರೀಯ ಹಾಲಿನ ದಿನಾಚರಣೆ ಅನ್ನು ಆಚರಣೆ ಮಾಡುತ್ತಿದ್ದೇವೆ. ಇದರ ಮುಖ್ಯ ಉದ್ದೇಶ ಹಾಲಿನ ಮಹತ್ವವನ್ನು ಸಾರುವುದಾಗಿದೆ. ಹಾಲಿನ ಉತ್ಪಾದನೆ ಮತ್ತು ಬಳಕೆಯನ್ನು ಹೆಚ್ಚಳ ಮಾಡುವ ಕಾರ್ಯಕ್ರಮವಾಗಿದೆ. ಹಾಲು ಒಂದು ಸಂಪೂರ್ಣ ಆಹಾರವಾಗಿದೆ. ಒಬ್ಬ ಮನುಷ್ಯನಿಗೆ ಹಾಗೂ ಮಕ್ಕಳಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಹಾಲು ಒಳಗೊಂಡಿದೆ. ಹೆಚ್ಚು ಹಾಲನ್ನು ಬಳಕೆ ಮಾಡುವುದರಿಂದ ದೈಹಿಕವಾಗಿ ಆರೋಗ್ಯವನ್ನು ಹೊಂದಬಹುದು.ಈ ಕಾರಣಕ್ಕಾಗಿ ಮೈಸೂರಿನ ಎಲ್ಲಾ ಘಟಕಗಳ ಮುಖ್ಯಸ್ಥರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡಂತೆ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡು ಹಲವೆಡೆ ಅರಿವು ಮೂಡಿಸುವ ಕೆಲಸವನ್ನು ಮಾಡಿದ್ದೇವೆಂದರು.

ನಿನ್ನೆ ದಿನ ಕೆಎಂಎಫ್ ಇತಿಹಾಸದಲ್ಲೇ ಅತಿ ಹೆಚ್ಚು ಹಾಲಿನ ಶೇಖರಣೆ ಮಾಡಿದ್ದು, ಬರೋಬ್ಬರಿ 94 ಲಕ್ಷ 26 ಸಾವಿರ ಕೆಜಿ ಹಾಲಿನ ಶೇಖರಿಸಿ ದಾಖಲೆ ಬರೆದಿದ್ದೇವೆ. ಸದ್ಯದಲ್ಲೇ ನಾವು ಒಂದು ಕೋಟಿ ಹಾಲಿನ ಶೇಖರಣೆ ಗುರಿ ಸಾಧಿಸುವ ವಿಶ್ವಾಸವಿದೆ. ಈ ಬಾರಿ ಬೇಸಿಗೆಯಲ್ಲಿಯೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಾಲು, ಮೊಸರು ಹಾಗೂ ಮಜ್ಜಿಗೆ ಉತ್ಪನ್ನಗಳನ್ನು ನೀಡಿದ್ದೇವೆ. ವಿಶೇಷವಾಗಿ ಗರಿಷ್ಠ 39 ಸಾವಿರ ಲೀಟರ್ ಐಸ್ ಕ್ರೀಮ್ ಮಾರಾಟ ಮಾಡಿದ್ದೇವೆ. ಕಳೆದ ವರ್ಷ 16 ಸಾವಿರ ಲೀಟರ್ ಮಾಡಿದ್ದು, ಈಗ ದುಪ್ಪಟ್ಟು ಹೆಚ್ಚಳದಲ್ಲಿ ಮಾರಾಟ ಮಾಡಿದ್ದೇವೆ ಎಂದು ಹೇಳಿದರು.
ಮುಂಬೈನಲ್ಲಿ 2 ಲಕ್ಷ ಲೀಟರ್ ಹಾಲು ಮಾರಾಟ
ಹಾಲಿನ ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮುಂಬೈನಲ್ಲಿಯೂ ಪ್ರತಿನಿತ್ಯ 2 ಲಕ್ಷ ಲೀಟರ್ ಹಾಲಿನ ಮಾರಾಟಕ್ಕೆ ಕ್ರಮವಹಿಸಲಾಗಿದೆ. ಇನ್ನೂ ಒಂದು ಲಕ್ಷ ಲೀಟರ್ ಹೆಚ್ಚಿನ ಹಾಲು ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಂತೆಯೇ ಚೆನ್ನೈ ಮಾರುಕಟ್ಟೆಯಲ್ಲಿ ಸಹ 35 ಲೀಟರ್ ಹಾಲು ಪ್ರತಿದಿನ ಮಾರಾಟ ಮಾಡಲಾಗುತ್ತಿದೆ. ಇನ್ನೂ 50 ರಿಂದ 1 ಲಕ್ಷ ಲೀಟರ್ ಹಾಲು ಮಾರಾಟ ಹೆಚ್ಚಳಕ್ಕೆ ಕ್ರಮವಹಿಸಲಾಗಿದೆ. ಇನ್ನೂ ಇದೇ ಜಾಗದಲ್ಲಿ ಬಿಎಸ್ ಎನ್ ಎಲ್ ಸಹಯೋಗದೊಂದಿಗೆ 16 ಪಾರ್ಲರ್ ನಿರ್ಮಿಸುವ ಮಾತುಕತೆ ಆಗಿದ್ದು, ಆ ಬಗ್ಗೆಯೂ ಕ್ರಮವಹಿಸಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಹೇಳಿದರು.
ಪ್ರತಿ ಪಾರ್ಲರ್ ಗಳಲ್ಲಿಯೂ ಉತ್ಪನ್ನ ಸಿಗುವಂತೆ ಮಾಡಿದ್ದು, ಪ್ರತಿ ರೈತರಿಗೆ ನಿಗಧಿತ ಅವಧಿಯಲ್ಲಿ ಅನುದನ ಬಿಡುಗಡೆಗೆ ಕ್ರಮಹಿಸಿದ್ದೇವೆ. ಗ್ರಾಮೀಣ ಭಾಗದ ಒಕ್ಕೂಟದಲ್ಲಿ ಆಚರಣೆಗೆ ಸೂಚಿಸಿದ್ದು, ಗ್ರಾಮೀಣ ಭಾಗದಲ್ಲಿ ಹಸುಗೆ ತಾಯಿ ಸ್ಥಾನ ನೀಡಿ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆಂದರು. ಇನ್ನೂ ನಂದಿನಿ ಪಾರ್ಲರ್ ಗಳಲ್ಲಿ ಅನ್ಯ ಉತ್ಪನ್ನಗಳ ಮಾರಾಟಕ್ಕೆ ವಿಜಲಿನ್ಸ್ ತಂಡಗಳು ನಿರಂತರವಾಗಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಖಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯ ಕುಮಾರ್ ಮಾತನಾಡಿ, ಮೈಸೂರಿನ ಜನತೆಗೆ ವಿಶ್ವ ಹಾಲಿನ ದಿನದ ಶುಭಾಶಯಗಳು. ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ ಕಳೆದ ಮೂರು ವರ್ಷದಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮೊದಲ ಬಾರಿಗೆ ನಡಿಗೆ ಮೂಲಕ ಅರಿವು ಮೂಡಿಸಿದ್ದೇವು. ಕಳೆದ ಬಾರಿ ಕೆಲವೊಂದು ಆಶ್ರಮದಲ್ಲಿ ಅರಿವು ಮೂಡಿಸಿದ್ದೇವು. ಈ ಬಾರಿ ಬೈಕ್ ರ್ಯಲಿ ಮೂಲಕ ಆಚರಿಸಿದ್ದೇವೆ. ಹಾಲು ಒಂದು ಸಮತೋಲನ ಆಹಾರವಾಗಿದ್ದು, ಇದರಲ್ಲಿ ಎಲ್ಲಾ ರೀತಿಯ ಖನಿಜ, ಪೋಷಕಾಂಶಯುಕ್ತ ಪದಾರ್ಥ ಇರಲಿದೆ. ಹೀಗಾಗಿ ರೈತರು ಹಾಗೂ ಗ್ರಾಹಕರಿಗೆ ಈ ದಿನದ ಶುಭಾಶಯ ಕೋರುತ್ತಾ, ಹಾಲನ್ನು ಹೆಚ್ಚಾಗಿ ಬಳಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು. ಮಾರುಕಟ್ಟೆ ವ್ಯವಸ್ಥಾಪಕರಾದ ಎಚ್.ಕೆ.ಜಯಶಂಕರ್ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.