ಪಿರಿಯಾಪಟ್ಟಣ: ಚಿತ್ರನಟ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವ ಮೂಲಕ 63ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು.
ಬೆಂಗಳೂರಿನ ರಾಜಾಜಿನಗರದ ರವಿಕಲಾ ನಿವಾಸದಲ್ಲಿ ವಿವಿಧ ಅಭಿಮಾನಿ ಸಂಘದ ಪದಾಧಿಕಾರಿಗಳು ಹಾಗೂ ದೂರದ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡು ತಮ್ಮ ಫ್ಯಾನ್ಸ್ ಗಳಿಗೆ ಸೆಲ್ಫಿ ನೀಡುವ ಮೂಲಕ ಸಂತಸ ಹಂಚಿಕೊಂಡರು, ಕ್ರೇಜಿಸ್ಟಾರ್ ನಟನೆಯ ಜಡ್ಜ್ ಮೆಂಟ್ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಈ ಬಾರಿಯ ಹುಟ್ಟು ಹಬ್ಬದ ಸಂತೋಷವನ್ನು ಮತ್ತಷ್ಟು ಇಮ್ಮಡಿಗೊಳಿಸಿತ್ತು.
ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷರಾದ ಜೆ.ಕೆ ಮೋಹನ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ಮೈಸೂರು ದಾವಣಗೆರೆ ಬೆಂಗಳೂರು ರಾಣೆಬೆನ್ನೂರು ಹುಬ್ಬಳ್ಳಿ ಬಳ್ಳಾರಿ ಕೊಪ್ಪಳ ಬಾಗಲಕೋಟೆ ಸೇರಿದಂತೆ ವಿವಿದೆಡೆಯ ಜಿಲ್ಲಾ ಪದಾಧಿಕಾರಿಗಳು ಬೆಂಗಳೂರಿನ ರವಿ ಕಲಾ ನಿವಾಸದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರನ್ನು ಭೇಟಿ ಮಾಡಿ 63ನೇ ವರ್ಷದ ಹುಟ್ಟುಹಬ್ಬದ ಶುಭ ಕೋರಿದರು.

ಈ ವೇಳೆ ರಾಜ್ಯದ್ಯಕ್ಷರಾದ ಜೆ.ಕೆ ಮೋಹನ್ ಅವರು ಮಾತನಾಡಿ ಕ್ರೇಜಿಸ್ಟಾರ್ ಡಾ.ವಿ ರವಿಚಂದ್ರನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಪ್ರಪ್ರಥಮವಾಗಿ ಸ್ಥಾಪಿತವಾದ ಅಭಿಮಾನಿಗಳ ಸಂಘ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘವಾಗಿದ್ದು ಕಳೆದ 31 ವರ್ಷಗಳಿಂದ ಮನರಂಜನೆ ಸೇರಿದಂತೆ ಶೈಕ್ಷಣಿಕ ಧಾರ್ಮಿಕ ಆರೋಗ್ಯ ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಅವರು ಮಾತನಾಡಿ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ ಪ್ರಾರಂಭವಾಗಿನಿಂದ ಕನ್ನಡ ಚಿತ್ರರಂಗದ ಯುವ ನಟರು ಸೇರಿದಂತೆ ಹಿರಿಯ ಕಲಾವಿದರನ್ನು ಗುರುತಿಸಿ ಸಂಘದ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ, ಕನ್ನಡ ಚಿತ್ರರಂಗದಲ್ಲಿ ಹಲವು ವಿಶೇಷತೆಗಳ ಮೂಲಕ ಜನಪ್ರಿಯರಾಗಿರುವ ಕ್ರೇಜಿಸ್ಟಾರ್ ಅವರ ಮುಂಬರುವ ಸಿನಿ ಜೀವನ ಮತ್ತಷ್ಟು ಉಜ್ವಲವಾಗಲಿ ಎಂದರು.
ಮೈಸೂರು ಜಿಲ್ಲಾಧ್ಯಕ್ಷ ಸತೀಶ್ ಆರಾಧ್ಯ ಮಾತನಾಡಿ ಚಿತ್ರನಟರ ಅಭಿಮಾನಿ ಸಂಘ ಕೇವಲ ಮನರಂಜನೆಗೆ ಸೀಮಿತವಾಗದೆ ಕಳೆದ ಮೂರು ದಶಕಗಳಿಂದ ರಾಜ್ಯಾಧ್ಯಕ್ಷರಾದ ಜೆ.ಕೆ ಮೋಹನ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಬಿ.ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿದೆಡೆ ಶೈಕ್ಷಣಿಕ ಆರೋಗ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನ ಮನ್ನಣೆ ಗಳಿಸಿದೆ, ಈಚೆಗೆ ತೆರೆಕಂಡ ಜಡ್ಜ್ ಮೆಂಟ್ ಚಿತ್ರದಲ್ಲಿ ವಕೀಲ ಪಾತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಮುಂದಿನ ದಿನಗಳಲ್ಲಿ ಅವರಿಂದ ಮತ್ತಷ್ಟು ಹೊಸತನದ ಚಿತ್ರಗಳು ಮೂಡಿಬಂದು ಸಾಮಾಜಿಕ ಸಂದೇಶಗಳ ಮೂಲಕ ಜನಪ್ರಿಯವಾಗಲಿ ಎಂದರು.
ಈ ವೇಳೆ ಕ್ರೇಜಿಸ್ಟಾರ್ ಅವರಿಗೆ ಬೃಹತಾಕಾರದ ಗುಲಾಬಿ ಹೂವಿನ ಹಾರ ಮೈಸೂರು ಪೇಠ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಶುಭ ಕೋರಿದರು.
ಈ ಸಂದರ್ಭ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎಂ.ಮನು, ರಾಜ್ಯ ಪದಾಧಿಕಾರಿಗಳಾದ ಡಾ.ಶಿವಕುಮಾರ್, ಶಂಕರ್, ಚೌಡಾಚಾರಿ, ಬೆಕ್ಕರೆ ನಾಗೇಂದ್ರ ಮತ್ತಿತರಿದ್ದರು.



