Sunday, April 20, 2025
Google search engine

Homeರಾಜ್ಯಮತಗಟ್ಟೆ ಸಮೀಕ್ಷೆಗಳ ಅಂದಾಜು ಪ್ರಕಟ

ಮತಗಟ್ಟೆ ಸಮೀಕ್ಷೆಗಳ ಅಂದಾಜು ಪ್ರಕಟ

ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮುಗಿಯುತ್ತಿದ್ದಂತೆ ವಿವಿಧ ಸಂಸ್ಥೆಗಳು ತಾವು ನಡೆಸಿದ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಗೆಲುವಿನತ್ತ ಮುನ್ನಡೆಯಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಅಂದಾಜಿಸಿವೆ.

ಎನ್‌ಡಿಎಗೆ ೩೫೦ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿವೆ ಎಂದು ಹೆಚ್ಚು ಸಮೀಕ್ಷೆಗಳು ಹೇಳಿವೆ. ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತ ಎಣಿಕೆ ಮಂಗಳವಾರ (ಜೂನ್ ೪) ನಡೆಯಲಿದೆ. ಲೋಕಸಭೆಯಲ್ಲಿ ಸರಳ ಬಹುಮತಕ್ಕೆ ೨೭೨ ಸ್ಥಾನಗಳು ಬೇಕು. ೨೦೧೯ರ ಚುನಾವಣೆಯಲ್ಲಿ ಎನ್‌ಡಿಎ, ೩೫೩ ಸ್ಥಾನಗಳೊಂದಿಗೆ ಅಧಿಕಾರಕ್ಕೇರಿತ್ತು.

ಸಮೀಕ್ಷೆಗಳ ಪ್ರಕಾರ `ಇಂಡಿಯಾ’ ಮೈತ್ರಿಕೂಟಕ್ಕೆ ಕೇವಲ ೧೨೫ ರಿಂದ ೧೫೦ರ ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆಗಳು ಅಂದಾಜಿಸಿವೆ. ಉತ್ತರ ಪ್ರದೇಶದ ೮೦ ಸ್ಥಾನಗಳಲ್ಲಿ ಬಿಜೆಪಿ ೬೫ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ೬೨ ಸ್ಥಾನಗಳನ್ನು ಗೆದ್ದುಕೊಂಡಿತ್ತು. ತನ್ನ ಭದ್ರಕೋಟೆ ಎನಿಸಿರುವ ಗುಜರಾತ್, ಛತ್ತೀಸಗಢ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ಓಟ ಮುಂದುವರಿಯಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಇಂಡಿಯಾ ಟಿವಿ, ಸಿಎನ್‌ಎಕ್ಸ್ ಸಮೀಕ್ಷೆಯು ಎನ್‌ಡಿಎಗೆ ಅತಿಹೆಚ್ಚು ಸ್ಥಾನಗಳನ್ನು ಅಂದಾಜು ಮಾಡಿದ್ದು, ೩೭೧ ರಿಂದ ೪೦೧ ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದೆ. ಎನ್‌ಡಿಎ ಈ ಬಾರಿ ೪೦೦ ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಚುನಾವಣಾ ಪ್ರಚಾರದ ಉದ್ದಕ್ಕೂ ಈ ಮಾತು ಪುನರುಚ್ಚರಿಸಿದ್ದರು. ಪಶ್ಚಿಮ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ.

RELATED ARTICLES
- Advertisment -
Google search engine

Most Popular