ನವದೆಹಲಿ: ರಾಜ್ಯದ ಪ್ರಮುಖ ಮಾರ್ಗವಾದ ಶಿರಾಡಿ ಘಾಟ್ ಟನಲ್ ಹಾಗೂ ತುಮಕೂರು ರಸ್ತೆಯ ಪೀಣ್ಯ ಕೈಗಾರಿಕಾ ಪ್ರದೇಶದಿಂದ ತಮಿಳುನಾಡಿನ ಗಡಿ ಪ್ರದೇಶ ಹೊಸೂರುವರೆಗೆ ಸುರಂಗ ರಸ್ತೆಯನ್ನು ನಿರ್ಮಾಣ ಸಂಬಂಧ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದರು.
ಸೋಮವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತುಮಕೂರು ರಸ್ತೆಯ ಪೀಣ್ಯ ಕೈಗಾರಿಕಾ ಪ್ರದೇಶದಿಂದ ತಮಿಳುನಾಡಿನ ಗಡಿ ಪ್ರದೇಶ ಹೊಸೂರುವರೆಗೆ ಸುರಂಗ ರಸ್ತೆಯನ್ನು ನಿರ್ಮಾಣ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದರು.
ಈ ವೇಳೆ ರಾಜ್ಯದಲ್ಲಿ ಒಟ್ಟು 14 ಯೋಜನೆಗಳನ್ನು ನಿರ್ಮಾಣ ಮಾಡುಂತೆ ಕೇಂದ್ರ ಸಚಿವರಿಗೆ ಮನವಿಯನ್ನು ಸಲ್ಲಿಕೆ ಮಾಡಿದರು. ಇಲ್ಲಿ ಫ್ಲೈಓವರ್ ರಸ್ತೆಗಳು, ಘಾಟ್ ರಸ್ತೆಗಳು, ಸುರಂಗ ರಸ್ತೆಗಳು ಹಾಗೂ ಇತರೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವಂತೆ ಸೀತ್ ಜಾರಕಿಹೊಳಿ ಸಲ್ಲಿಸಿರುವ ಪ್ರಸ್ತಾವನೆ ಒಳಗೊಂಡಿದೆ.
ಜಾರಕಿಹೊಳಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ರಾಜ್ಯದ ಪ್ರಮುಖ ಮಾರ್ಗವಾದ ಶಿರಾಡಿ ಘಾಟ್ ಟನಲ್, ಹೊನ್ನಾವರ- ಕುಮುಟಾ ಫ್ಲೈ ಓವರ್, ಬೆಂಗಳೂರಿನಲ್ಲಿ ಪಿಣ್ಯ- ಹೊಸೂರು ಸುರಂಗ ಮಾರ್ಗ ಹಾಗೂ ಬೆಂಗಳೂರು ಕೇಂದ್ರ ಭಾಗದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವಂತೆ (ತುಮಕೂರು ರಸ್ತೆಯಲ್ಲಿರುವ ಡಾ. ಶಿವಕುಮಾರ್ ಸ್ವಾಮೀಜಿ ಮೇಲ್ಸೇತುವೆ ಮಾದರಿ) ಫ್ಲೈಓವರ್ ನಿರ್ಮಾಣ ಮಾಡುವಂತೆ ಹಾಗೂ ಕಲಬುರಗಿ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡುವಂತೆಯೂ ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದೆ.
ಅದೇ ರೀತಿ ಬೆಳಗಾವಿ ನಗರ- ಪುಣೆ -ಬೆಂಗಳೂರು ರಸ್ತೆ ಉನ್ನತೀಕರಣ ಮಾಡಬೇಕು. ರಾಯಚೂರು, ಗದಗ ಮತ್ತು ಶಿವಮೊಗ್ಗ ನಗರಗಳಿಗೆ ರಿಂಗ್ ರಸ್ತೆಯನ್ನು ನಿರ್ಮಾಣ ಮಾಡಬೇಕು. ಮೈಸೂರು ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ನಲ್ಲಿ ಫೈಓವರ್ ನಿರ್ಮಾಣ ಮಾಡುವಂತೆಯೂ ಮನವಿ ಮಾಡಲಾಗಿದೆ. ಈ ಎಲ್ಲ ಮನವಿ ಪುರಸ್ಕರಿಸಿದಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಮಾರ್ಗವನ್ನು ಕೇಂದ್ರ ಸರ್ಕಾರ 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಈ ಹಿಂದೆ ಸಂಚಾರಕ್ಕೆ ಅನುಕೂಲವಾಗಿದ್ದ ಹಳೆಯ ಬೆಂಗಳೂರು- ಮೈಸೂರು ರಸ್ತೆಯನ್ನೂ ಅಭಿವೃದ್ಧಿ ಮಾಡಬೇಕು. ಈ ಹಳೆಯ ರಸ್ತೆಯನ್ನು ಅಭಿವೃದ್ಧಿ ಮಾಡುವುದರಿಂದ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ನಗರದ ಜನರಿಗೆ ಸಹಕಾರಿ ಆಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮನವಿ ಸಲ್ಲಿಸಿದ್ದಾರೆ.