ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಬಂಧನಕ್ಕೆ ವಿಶೇಷ ತನಿಖಾ ತಂಡ ಬಲೆ ಬೀಸಿದ್ದು, ಹುಡುಕಾಟಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿರುವುದಾಗಿ ವರದಿಯಾಗಿದೆ.
ಸಂತ್ರಸ್ತೆ ಅಪಹರಣ ನಡೆದ ದಿನದಿಂದಲೂ ಬಹುತೇಕ ಕಣ್ಮರೆಯಾಗಿದ್ದ ಭವಾನಿ, ನ್ಯಾಯಾಲಯವು ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಬಳಿಕ ಆಪ್ತರಿಗೂ ಸುಳಿವು ನೀಡದೆ ತಲೆಮರೆಸಿಕೊಂಡಿದ್ದಾರೆ. ಭವಾನಿ ರೇವಣ್ಣ ಬಂಧನಕ್ಕಾಗಿಯೇ ಎಸ್‌ಐಟಿ ೪ ವಿಶೇಷ ತಂಡಗಳನ್ನು ರಚನೆ ಮಾಡಿದೆ. ಮತ್ತೊಂದು ಕಡೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಸ್‌ಐಟಿ ವಶದಲ್ಲಿದ್ದು, ಅವರ ವಿಚಾರಣೆ ಕೂಡ ನಡೆಯುತ್ತಿದೆ.
ಎಚ್. ಡಿ. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದು ಆರೋಪವಾಗಿದೆ. ಈ ದೂರುದಾರ ಮಹಿಳೆಯನ್ನು ಅಪಹರಣ ಮಾಡಲಾಗಿತ್ತು. ಈ ಕುರಿತು ಕೆ.ಆರ್. ನಗರ ಠಾಣೆಯಲ್ಲಿ ಮಹಿಳೆಯ ಪುತ್ರ ಅಪಹರಣ ಪ್ರಕರಣ ದಾಖಲಿಸಿದ್ದರು.