ಚಾಮರಾಜನಗರ: ನಗರದಲ್ಲಿ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾ ರಥೋತ್ಸವವು ಜುಲೈ 3 ರಂದು ನಡೆಯಲಿದ್ದು, ಇದರ ಅಂಗವಾಗಿ ಜುಲೈ 7ರವರೆಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.
ಜುಲೈ 3ರಂದು ಸೋಮವಾರ ಮೂಲ/ಪೂರ್ವಾಷಾಢ ನಕ್ಷತ್ರದಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ಜರುಗಲಿದೆ. ಜೂನ್ 28ರಂದು ಚಂದ್ರಮಂಡಲಾರೋಹಣೋತ್ಸವ, 29ರಂದು ಅನಂತ ಪೀಠಾರೋಹಣೋತ್ಸವ, 30ರಂದು ಪುಷ್ಪಮಂಟಪಾರೋಹಣೋತ್ಸವ, ಜುಲೈ 1 ರಂದು ವೃಷಭಾರೋಹಣೋತ್ಸವ, 2ರಂದು ವಸಂತೋತ್ಸವ ಪೂರ್ವಕ ಗಜಾವಾಹನೋತ್ಸವ ನಡೆಯಲಿದೆ.
ಜುಲೈ 4ರಂದು ಮೃಗಯಾತ್ರಾ ಪೂರ್ವಕ ಅಶ್ವಾರೋಹಣ ನಂತರ ಮಹಾಭೂತಾರೋಹಣ, ದೇವಿ ಪ್ರಣಯ ಕಲಹ ಸಧಾನೋತ್ಸವ, 5ರಂದು ಹಗಲುಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ, ಧ್ವಜಾವರೋಹಣ, ಮೌನಬಲಿ, 6ರಂದು ಪುಷ್ಪಯೋಗ ಪೂರ್ವಕ ಕೈಲಾಸಯಾನಾರೋಹಣೋತ್ಸವ ಹಾಗೂ 7ರಂದು ಮಹಾಸಂಪ್ರೋಕ್ಷಣಾ ಪೂರ್ವಕ ನಂದಿವಾಹನೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.